ಬೆಂಗಳೂರು : ಮಾಜಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್ಐಆರ್(FIR) ದಾಖಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹತ್ಯೆ ಮಾಡಿ ಎಂಬ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದ ಆರೋಪ ಹಿನ್ನೆಲೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಅವರು ಫೆಬ್ರವರಿ 15 ದೂರು ನೀಡಿದ್ದರು.
ದೂರಿನ ಬಳಿಕ ಈವರೆಗೆ ಪೊಲೀಸರು ಯಾವುದೇ ಕ್ರಮಕೈಗೊಂಡಿರಲಿಲ್ಲ. ಹೀಗಾಗಿ, ಇಂದು ಪೊಲೀಸ್ ಠಾಣೆಗೆ ತೆರಳಿ ಮತ್ತೆ ದೂರು ಸಲ್ಲಿಸಿದ್ದಾರೆ. ಇದೀಗ, ಶಾಸಕ ಅಶ್ವತ್ಥನಾರಾಯಣ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ : ಮೋದಿ ಫೋಟೋ ಸ್ಟೇಟಸ್ ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ
ಶಾಸಕ ಅಶ್ವತ್ಥನಾರಾಯಣ ಅವರು ಫೆಬ್ರವರಿ 15ರಂದು ಮಂಡ್ಯದ ಸಾತನೂರಿನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಟಿಪ್ಪು ಸುಲ್ತಾನ್ ನನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎಂದು ಹೇಳಿಕೆ ನೀಡಿದ್ದರು.
ಈ ಹಿಂದೆ ಕೊಡಗು ಜಿಲ್ಲೆಯಲ್ಲೂ ಸಿದ್ದರಾಮಯ್ಯ ಅವರ ಮೇಲೆ ಹಲ್ಲೆಗೆ ಯತ್ನ ನಡೆದಿತ್ತು. ಮಳೆ ಪ್ರವಾಹ ವೀಕ್ಷಣೆಗೆ ತೆರಳಿದ್ದ ವೇಳೆ ಘಟನೆ ನಡೆದಿತ್ತು. ಒಂದು ವರ್ಗ ಕೊಲೆಗೆ ಯತ್ನ ಮಾಡಿತ್ತು. ಮತ್ತೊಮ್ಮೆ ಸಮಾಜ ದ್ರೋಹಿ, ಕೊಲೆ ಮಾಡಲು ಯತ್ನಿಸುವ ಸಾಧ್ಯತೆಗಳಿವೆ. ಹೀಗಾಗಿ, ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಹೇಳಿದ್ದಾರೆ.