ಬೆಂಗಳೂರು : ರಾಜ್ಯದಲ್ಲಿ ಮತ್ತೆ ಟಿಪ್ಪು ಜಯಂತಿ ಆಚರಣೆ ವಿಚಾರ ಸದ್ದು ಮಾಡುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಿಸದಿರಲು ನಿರ್ಧರಿಸಿದೆ.
ಹೌದು, ಬಿಜೆಪಿ ಮಣಿಸಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದಿರುವ ‘ಶಿವ’ರಾಮಯ್ಯ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಕಳೆದ ಬಾರಿ ಭಾರೀ ವಿವಾದಕ್ಕೀಡಾಗಿದ್ದ ಟಿಪ್ಪು ಜಯಂತಿ ಆಚರಣೆ ಬಗ್ಗೆ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ಒಟ್ಟು 31 ಜಯಂತಿಗಳ ಆಚರಣೆ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಸರ್ಕಾರದಿಂದ ಆಚರಿಸುವ ಜಯಂತಿಗಳ ಪಟ್ಟಿ ಹಾಗೂ ಆಚರಿಸುವ ದಿನ ಮತ್ತು ಸ್ಥಳವನ್ನು ನಿಗದಿ ಮಾಡಲಾಗಿದೆ. ಅಲ್ಪಸಂಖ್ಯಾತ ನಿಗಮದಿಂದ ಟಿಪ್ಪು ಜಯಂತಿ ಆಚರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ವಿವಾದ ಸೃಷ್ಟಿಸಿದ್ದ ಟಿಪ್ಪು ಜಯಂತಿ
ಮೈಸೂರು ಹುಲಿ ಎಂದೇ ಕರೆಯಲ್ಪಡುವ ಟಿಪ್ಪು ಸುಲ್ತಾನ್ ಅವರ ಜಯಂತಿ ಆಚರಣೆ ರಾಜ್ಯದಲ್ಲಿ ದೊಡ್ಡ ವಿವಾದ ಸೃಷ್ಟಿಸಿತ್ತು. ಟಿಪ್ಪು ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಲಾಗಿತ್ತು. ಇದಕ್ಕೆ ವಿರೋಧವೂ ವ್ಯಕ್ತವಾಗಿತ್ತು. ಹೀಗಾಗಿ, ಕಳೆದ ಬಾರಿಯ ಸನ್ನಿವೇಶ ಮರುಕಳಿಸದಂತೆ ರಾಜ್ಯ ಸರ್ಕಾರ ಎಚ್ಚರಿಕೆಯ ನಿರ್ಧಾರ ತೆಗೆದುಕೊಂಡಿದೆ.