ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನ ಹಲವು ಭಾಗಗಳಲ್ಲಿ ಇಂದು ಮಧ್ಯಾಹ್ನ ಮೂರು ಗಂಟೆ ವೇಳೆ ಭರ್ಜರಿ ಮಳೆಯಾಗಿದೆ.
ನಗರದ ಕೆಲ ಭಾಗಗಳಲ್ಲಿ ಆಲಿಕಲ್ಲು ಸಹಿತ ಮಳೆ ಸುರಿದಿದೆ. ಏಕಾಏಕಿ ಸುರಿದ ಮಳೆಯಿಂದ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಮಧ್ಯಾಹ್ನ 3.30ರ ಸುಮಾರಿಗೆ ಬೆಂಗಳೂರಿನಲ್ಲಿ ಕತ್ತಲ ವಾತಾವರಣ ಕಂಡುಬಂದಿತು.
ನಗರದ ಶಿವಾನಂದ ಸರ್ಕಲ್, ಮಲ್ಲೇಶ್ವರ, ಕೆ.ಆರ್ ಸರ್ಕಲ್ ಬಳಿ ಆಲಿಕಲ್ಲು ಮಳೆಯಾಗಿದ್ದು, ಗಾಳಿ ರಭಸಕ್ಕೆ ಕೆ.ಆರ್ ಸರ್ಕಲ್ ಬಳಿ ಬೃಹತ್ ಗಾತ್ರದ ಮರ ಧರೆಗೆ ಉರುಳಿದೆ. ಮಳೆಯ ಆರ್ಭಟಕ್ಕೆ ಬೆಂಗಳೂರಿನ ಹಲವು ಕಡೆ ರಸ್ತೆಗಳು ಜಲಾವೃತ್ತಗೊಂಡಿವೆ.
#WATCH | Karnataka: Bengaluru receives heavy rainfall. pic.twitter.com/wfJk4QFAQj
— ANI (@ANI) May 21, 2023
ಎಲ್ಲೆಲ್ಲಿ ಭಾರೀ ಮಳೆ?
ಇನ್ನೂ ವಿಧಾನಸೌಧ, ಆನಂದ್ ರಾವ್, ಮೆಜೆಸ್ಟಿಕ್, ರೇಸ್ ಕೋರ್ಸ್, ಕೆಆರ್ ಸರ್ಕಲ್, ಟೌನ್ ಹಾಲ್, ಕಾರ್ಪೊರೇಷನ್, ಮೈಸೂರು ಬ್ಯಾಂಕ್ ಸರ್ಕಲ್ , ಜಯನಗರ, ಮಲ್ಲೇಶ್ವರ ಸೇರಿ ಹಲವೆಡೆ ಭಾರೀ ಮಳೆಯಾಗಿದೆ. ನಗರದಲ್ಲಿ ಸುರಿದ ಭಾರೀ ಗಾಳಿ ಮಳೆಗೆ ಮರಗಳು ಧರೆಗೆ ಉರುಳಿವೆ. ರಸ್ತೆಯಲ್ಲಿ ಬಿದ್ದ ಮರಗಳನ್ನು ಟ್ರಾಫಿಕ್ ಪೊಲೀಸರು ತೆರವು ಮಾಡಿದ್ದಾರೆ.
ನೀರಿನಲ್ಲಿ ಮುಳುಗಿದ ಕಾರು
ಕೆ.ಆರ್ ವೃತ್ತದ ಅಂಡರ್ಪಾಸ್ನಲ್ಲಿ ಭಾರೀ ಮಳೆಯಿಂದ ನಿರು ಸಂಗ್ರಹವಾಗಿದ್ದು, ನೀರಿನಲ್ಲಿ ಕಾರು ಮುಳುಗಿದೆ. ಕೂಡಲೇ ಪೊಲೀಸರು ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಿದ್ದಾರೆ. ಕಾರಿನಲ್ಲಿದ್ದ ಮೂವರನ್ನು ರಕ್ಷಿಸಲಾಗಿದ್ದು, ಓರ್ವ ಮಹಿಳೆ ಅಸ್ವಸ್ಥಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ : ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ
ರಾಜ್ಯದ ಹಲವೆಡೆ ಭಾರೀ ಮಳೆ
ಕರಾವಳಿಯ ದಕ್ಷಿಣ ಕನ್ನಡ, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಚಿತ್ರದುರ್ಗ, ಕೋಲಾರ, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ತುಮಕೂರು ಜಿಲ್ಲೆಗಳ ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು ಹಗುರದಿಂದ ಸಾಧಾರಣ ಗುಡುಗು ಸಹಿತ ಮಳೆಯಾಗಬಹುದು ಎಂದು ಇಲಾಖೆ ಮಾಹಿತಿ ನೀಡಿದೆ.