ಬೆಂಗಳೂರು : ನೂತನ ಕಾಂಗ್ರೆಸ್ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಐದು ಗ್ಯಾರಂಟಿಗಳಿಗೆ ತಾತ್ವಿಕ ಅನುಮೋದನೆ ಪಡೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.
ಪ್ರಮಾಣವಚನ ಸ್ವೀಕಾರ ಸಮಾರಂಭದ ಬಳಿಕ ಮೊದಲ ಸಚಿವ ಸಂಪುಟ ಸಭೆ ನಡೆಸಿದ ಅವರು, ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಹೆಚ್ಚಿನ ವಿವರಗಳನ್ನು ಮುಂದಿನ ಸಚಿವ ಸಂಪುಟ ಸಭೆಗಳಲ್ಲಿ ಚರ್ಚಿಸಲಾಗುವುದು. ಈ ಕುರಿತು ಆದೇಶ ಹೊರಡಿಸಲಾಗುವುದು. ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಹಾಗೂ ಸಖಿ ಯೋಜನೆಗಳನ್ನು ಎಷ್ಟೇ ಹಣ ಖರ್ಚಾದರೂ ಜಾರಿಗೊಳಿಸುವುದಾಗಿ ತಿಳಿಸಿದರು.
ಇದನ್ನೂ ಓದಿ : ಸಿದ್ರಾಮಣ್ಣ.. ಈ ವರ್ಷದ ಬಜೆಟ್ ಗಾತ್ರವೆಷ್ಟು? : ‘ಸಿಎಂ ಸಿದ್ದು’ಗೆ ಪ್ರತಾಪ್ ಸಿಂಹ 5 ಪ್ರಶ್ನೆ
ನಾವು ಪ್ರಮುಖವಾಗಿ ನಮ್ಮ ಪ್ರಣಾಳಿಕೆ ಮೂಲಕ ಅನೇಕ ಭರವಸೆಗಳನ್ನು ಕೂಡ ಕೊಟ್ಟಿದ್ದೇವೆ. ಎಲ್ಲ ಭರವಸೆಗಳನ್ನು ಒಂದೇ ವರ್ಷದಲ್ಲಿ ಈಡೇರಿಸುವಂತಹದ್ದಲ್ಲ. 5 ವರ್ಷಗಳಲ್ಲಿ ಈಡೇರಿಸುತ್ತೇವೆ ಎಂದು ಅವರು ಹೇಳಿದರು.
5 ಗ್ಯಾರಂಟಿಗಳನ್ನು ಜನತೆಗೆ ವಾಗ್ದಾನದ ರೂಪದಲ್ಲಿ ಕೊಟ್ಟಿದ್ದೆವು. ಮೊದಲ ಸಚಿವ ಸಂಪುಟ ಸಭೆಯಲ್ಲೇ 5 ಗ್ಯಾರಂಟಿ ಈಡೇರಿಸುವುದಾಗಿ ಭರವೆ ನೀಡಿದ್ದು, ಸಚಿವ ಸಂಪುಟದಲ್ಲಿ ನಿರ್ಣಯ ಪಡೆದು ಆದೇಶ ಹೊರಡಿಸುವುದಾಗಿ ಹೇಳಿದ್ದೆವು. ಅದರಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಐದು ಗ್ಯಾರಂಟಿಗೆ ಯಾರು ಅರ್ಹರು?
- ಸರ್ಕಾರಿ ಬಸ್ ಗಳಲ್ಲಿ ಸಂಚರಿಸಲು ಕರ್ನಾಟಕದ ಮಹಿಳೆಯರಿಗೆ ಮಾತ್ರ ಉಚಿತ ಬಸ್ ಪಾಸ್
- ಪದವೀಧರ, ಡಿಪ್ಲೊಮಾ ನಿರುದ್ಯೋಗಿ ಯುವಕರಿಗೆ ಸಹಾಯಧನ
- ಎಲ್ಲಾ ಮನೆಗಳಿಗೂ 200 ಯೂನಿಟ್ ಕರೆಂಟ್ ಉಚಿತ
- ಪ್ರತಿಯೊಬ್ಬ ವ್ಯಕ್ತಿಗೂ 10 ಕಿಲೋ ಉಚಿತ ಅಕ್ಕಿ
- ಪ್ರತಿಯೊಬ್ಬ ಮನೆ ಒಡತಿಗೆ ತಿಂಗಳಿಗೆ 2000 ರೂ.