Tuesday, November 5, 2024

ದೊಡ್ಮನೆ ಜೊತೆ ನೇತ್ರದಾನದ ಹರಿಕಾರ ಭುಜಂಗ ಶೆಟ್ಟಿ ನಂಟು ಹೇಗಿತ್ತು ಗೊತ್ತಾ..?

ಬೆಂಗಳೂರು: ನಟಸಾರ್ವಭೌಮ ಡಾ. ರಾಜ್​​ಕುಮಾರ್ ಮೂಲಕ ನೇತ್ರದಾನ ಮಹಾದಾನ ಎಂದು ಸಾರಿದ ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ. ಕೆ ಭುಜಂಗ ಶೆಟ್ಟಿ ಇನ್ನು ನೆನಪು ಮಾತ್ರ.

ಡಾ ರಾಜ್​ಕುಮಾರ್ ಅವರಿಗೆ ಕಣ್ಣು ದಾನ ಮಾಡಲು ಪ್ರೇರೇಪಣೆ ನೀಡಿದ ಭುಜಂಗ ಶೆಟ್ಟಿ ಅವರು ನಾರಾಯಣ ನೇತ್ರಾಲಯಕ್ಕೆ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಹೌದು, ನಿತ್ಯ ಸಾವಿರಾರು ಮಂದಿಗೆ ಹೆಲ್ತ್ ಅಡ್ವೈಸ್ ಮಾಡ್ತಿದ್ದ ನೇತ್ರದಾನದ ಹರಿಕಾರ ಇನ್ನಿಲ್ಲ. ಇಷ್ಟಕ್ಕೂ ಅವ್ರಿಗೆ ಏನಾಗಿತ್ತು..? ದೊಡ್ಮನೆ ಜೊತೆ ಅವ್ರಿಗಿದ್ದ ನಂಟು ಎಂಥದ್ದು ಅನ್ನೋದಕ್ಕೆ ಉತ್ತರ ಇಲ್ಲಿದೆ ಮುಂದೆ ಓದಿ..

ನಾರಾಯಣ ನೇತ್ರಾಲಯ ಹಾಗೂ ಡಾ. ರಾಜ್​ಕುಮಾರ್ ಐ ಬ್ಯಾಂಕ್​ನ ಮುಖ್ಯಸ್ಥ ಡಾ. ಕೆ ಭುಜಂಗ ಶೆಟ್ಟಿ ಇನ್ನು ನೆನಪು ಮಾತ್ರ.  ಲಕ್ಷಾಂತರ ಮಂದಿ ಅಂಧರ ಬಾಳಿಗೆ ಬೆಳಕಾಗಿರೋ ಖ್ಯಾತ ನೇತ್ರ ತಜ್ಞ ಹೃದಯಾಘಾತದಿಂದ ಬಾರದೂರಿಗೆ ಪಯಣ ಬೆಳೆಸಿದ್ದಾರೆ. ಮೇ 19ರ ಸಂಜೆ 6ಕ್ಕೆ ಆಸ್ಪತ್ರೆಯಿಂದ ಮನೆಗೆ ತೆರಳಿದ ಬಳಿಕ ಜಿಮ್ ಮಾಡುವಾಗ ಕುಸಿದು ಬಿದ್ದ ಅವ್ರನ್ನ, ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯ್ತು. ಅಷ್ಟರಲ್ಲೇ ವಿಧಿ ಅವ್ರನ್ನ ಪರಲೋಕಕ್ಕೆ ಕೊಂಡೊಯ್ದಿತ್ತು.

ಇದನ್ನೂ ಓದಿ: ಖ್ಯಾತ ನೇತ್ರ ತಜ್ಞ ಡಾ.ಕೆ ಭುಜಂಗಶೆಟ್ಟಿ ಹೃದಯಾಘಾತದಿಂದ ನಿಧನ

69 ವಯಸ್ಸಿನ ಭುಜಂಗ ಶೆಟ್ಟಿ ಅವ್ರು, ನಾರಾಯಣ ನೇತ್ರಾಲಯದ ಮುಖ್ಯಸ್ಥತರಾಗಿದ್ದುಕೊಂಡೇ ಡಾ. ರಾಜ್​ಕುಮಾರ್ ನೇತ್ರದಾನ ಸಂಸ್ಥೆ ಹುಟ್ಟಿಹಾಕಿದ್ರು. ಆ ಮೂಲಕ ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಕಣ್ಣಿನ ಆಪರೇಷನ್​ಗಳ ಜೊತೆಗೆ ರಿವರ್ಸ್​ ಡಯಾಬಿಟೀಸ್ ಆವಿಷ್ಕರಿಸಿ, ರಿಯಲ್ ಹೆಲ್ತ್ ಗುರು ಅನಿಸಿಕೊಂಡಿದ್ದರು. ಸಾಕಷ್ಟು ಶುಗರ್ ಪೇಷಂಟ್ಸ್​​ಗೆ ಸಲಹೆ, ಸೂಚನೆಗಳನ್ನ ನೀಡೋ ಮೂಲಕ ಸ್ಫೂರ್ತಿಯ ಚಿಲುಮೆ ಅನಿಸಿಕೊಂಡಿದ್ದರು.

1994ರಲ್ಲಿ ಭುಜಂಗ ಶೆಟ್ಟಿ ಅವ್ರು ನಾರಾಯಣ ನೇತ್ರಾಲಯ ತೆರೆದಾಗ, ಅದ್ರ ಉದ್ಘಾಟನಾ ಕಾರ್ಯಕ್ರಮಕ್ಕೆ ಡಾ ರಾಜ್​ಕುಮಾರ್ ಆಗಮಿಸಿದ್ದರು. ಅಂದೇ ಇಡೀ ರಾಜ್​ಕುಮಾರ್ ಕುಟುಂಬದ ಎಲ್ಲಾ ಸದಸ್ಯರು ನೇತ್ರದಾನ ಮಾಡೋದಾಗಿ ಅಣ್ಣಾವ್ರು ಘೋಷಿಸಿದ್ದರು. ನೇತ್ರದಾನ ಮಹಾದಾನ. ಅಂಧಕಾರದ ಮನಸುಗಳು ಪ್ರಪಂಚವನ್ನು ನೋಡಲಿವೆ ಅನ್ನೋದಾದ್ರೆ ಸತ್ತ ನಂತ್ರ ಮಣ್ಣಲ್ಲಿ ಮಣ್ಣಾಗೋ ನೇತ್ರಗಳು ಪರರಿಗೆ ಉಪಯೋಗ ಆಗೋದೇ ಲೇಸು ಎಂದಿದ್ದರು. ಅದ್ರಂತೆ 2006ರಲ್ಲಿ ಡಾ. ರಾಜ್ ತಮ್ಮ ನಯನಗಳನ್ನ ದಾನ ಮಾಡಿದ್ರು.

ಅದಾದ ಬಳಿಕ ಪಾರ್ವತಮ್ಮ ರಾಜ್​ಕುಮಾರ್ ಕೂಡ ಪತಿಯ ಆ ಸಂಕಲ್ಪಕ್ಕೆ ಕೈ ಜೋಡಿಸಿದ್ರು. ಇತ್ತೀಚೆಗೆ ಕರ್ನಾಟಕರತ್ನ ಡಾ. ಪುನೀತ್ ರಾಜ್​ಕುಮಾರ್ ಹೃದಯಾಘಾತದಿಂದ ನಿಧನರಾದಾಗಲೂ ಅದೇ ಹಾದಿಯಲ್ಲಿ ನಡೆದಿದ್ದರು. ರಾಘವೇಂದ್ರ ರಾಜ್​ಕುಮಾರ್​ರ ಸೂಚನೆಯಂತೆ ಡಾ. ಭುಜಂಗ ಶೆಟ್ಟಿ ಅವ್ರೇ ಅಪ್ಪು ಅವ್ರ ನೇತ್ರಗಳನ್ನ ಪಡೆದು, ಅವ್ರ ಕಾರ್ನಿಯಾನ ಸುಮಾರು ನಾಲ್ಕು ಮಂದಿಗೆ ಅಳವಡಿಸಿದ್ರು.

ಹೀಗೆ ರಾಜ್​ಕುಮಾರ್ ಕುಟುಂಬದ ಮೂವರಿಂದ ಆರು ನಯನಗಳನ್ನ ಪಡೆದು, ಒಂದಷ್ಟು ಮಂದಿ ಬಾಳಿಗೆ ಬೆಳಕಾದ ಭುಜಂಗ ಶೆಟ್ಟಿ, ನೇತ್ರದಾನದ ಪ್ರಮಾಣ ಕಡಿಮೆ ಆಗಿದ್ದಕ್ಕೆ ಕಳವಳ ವ್ಯಕ್ತಪಡಿಸಿದ್ದರು. ಹೌದು.. ಕೊರೋನಾ ಸಮಯದಲ್ಲಿ ನೇತ್ರದಾನ ಮಾಡೋರ ಪ್ರಮಾಣ ಶೇಕಡಾ 80ಕ್ಕೆ ಕುಸಿದಿತ್ತು. ಆದ್ರೆ ಯಾವಾಗ ಅಪ್ಪು ನೇತ್ರದಾನ ಮಾಡಿದರೋ, ಆಗ ದಾನಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಯ್ತು. ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ನೇತ್ರದಾನ ಫಾರ್ಮ್​ಗೆ ಸಹಿ ಹಾಕಿರೋದು ನಿಜಕ್ಕೂ ಕ್ರಾಂತಿಯೇ ಸರಿ.

ಒಂದ್ಕಡೆ ಕತ್ತಲಿನಿಂದ ಬೆಳಕಿನೆಡೆಗೆ ಕರೆದೊಯ್ಯುತ್ತಿದ್ದ ಭುಜಂಗ ಶೆಟ್ಟಿ, ಮತ್ತೊಂದ್ಕಡೆ ಶುಗರ್ ಪೇಷಂಟ್ಸ್ ತಮಗಿರೋ ಖಾಯಿಲೆಯನ್ನ ಮೆಟ್ಟಿ ನಿಲ್ಲೋದು ಹೇಗೆ ಅನ್ನೋದನ್ನ ಮನದಷ್ಟು ಮಾಡ್ತಿದ್ರು. ಅಂತಹ ಹೆಲ್ತ್ ಗುರು ಇನ್ನಿಲ್ಲ ಅನ್ನೋದು ನಿಜಕ್ಕೂ ನೋವಿನ ಸಂಗತಿ. ಮಾಜಿ, ಹಾಲಿ ಸಿಎಂಗಳಿಂದ ಹಿಡಿದು, ಮಿಸ್ಟರ್​ಗಳು, ಡಾ. ರಾಜ್​ ಕುಟುಂಬದ ಶಿವಣ್ಣ, ರಾಘಣ್ಣ, ಅಶ್ವಿನಿ ಸೇರಿದಂತೆ ಸಾಕಷ್ಟು ಮಂದಿ ತಾರೆಯರು ಸಂತಾಪ ಸೂಚಿಸಿದ್ದಾರೆ.

 

RELATED ARTICLES

Related Articles

TRENDING ARTICLES