ಬೆಂಗಳೂರು : ನಾನು ಡಿಸಿಎಂ ಸ್ಥಾನ ಕೇಳುವುದು ಏನಿದೆ? ನನಗೆ ಕೊಡಲೇಬೇಕು ಎಂದು ಮಾಜಿ ಡಿಸಿಎಂ ಹಾಗೂ ಕೊರಟಗೆರೆ ಶಾಸಕ ಡಾ.ಜಿ ಪರಮೇಶ್ವರ್ ಬೇಡಿಕೆ ಇಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಅವರ ಅಭಿಪ್ರಾಯ ಹೇಳಿರುತ್ತಾರೆ. ಎಲ್ಲರೂ ಒಟ್ಟಿಗೆ ಇದ್ದೇವೆ. ಎಲ್ಲರೂ ಸೇರಿ ಅಧಿಕಾರ ನಡೆಸುತ್ತೇವೆ ಎಂದಿದ್ದಾರೆ.
ಪಕ್ಷ ಅಧಿಕಾರಕ್ಕೆ ಬರಲು ಎಲ್ಲರೂ ಕೊಡುಗೆ ನೀಡಿದ್ದಾರೆ. ಒಬ್ಬರೇ ಉಪ ಮುಖ್ಯಮಂತ್ರಿ ಆಗಿರಬೇಕು ಎಂದು ಹೇಳಲು ಬರುವುದಿಲ್ಲ. ಅಧಿಕೃತವಾಗಿ ಡಿಸಿಎಂ ಸ್ಥಾನ ಬರಬೇಕಿದೆ ಎನ್ನುವ ಮೂಲಕ ನನಗೂ ಡಿಸಿಎಂ ಹುದ್ದೆ ಕೊಡಬೇಕೆಂಬ ಆಸೆ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ : ಒಕ್ಕಲಿಗರು HDD, HDK ಮಾತಿಗೆ ಮರಳಾಗಿ ವೋಟ್ ಹಾಕಿದ್ದಾರೆ : ಸಿ.ಪಿ ಯೋಗೇಶ್ವರ್
ಲಾಬಿ, ಹೋರಾಟ ಮಾಡಲ್ಲ
ನಾವು ಪಕ್ಷದ ಶಿಸ್ತಿನ ಸಿಪಾಯಿಗಳು. ಲಾಬಿ, ಹೋರಾಟ ಮಾಡಲ್ಲ. ಆದರೆ, ಹೈಕಮಾಂಡ್ ಅರ್ಥ ಮಾಡಿಕೊಳ್ಳಬೇಕು. ಯಾವ ಸಮುದಾಯದ ಬೆಂಬಲದೊರಕಿದೆ ಎಂದು. ರಾಜಸ್ಥಾನದ ರೀತಿ ಇಲ್ಲಿ ಆಗಲು ಬಿಡಲ್ಲ. ಸರ್ಕಾರ ಒಳ್ಳೆಯ ಆಡಳಿತ ನೀಡುವ ನೀರೀಕ್ಷೆ ಜನರಲ್ಲಿದೆ ಎಂದು ತಿಳಿಸಿದ್ದಾರೆ.
ಫಲಿತಾಂಶದ ಮೇಲೆ ದಲಿತ ಮತಗಳ ಪರಿಣಾಮ
ಸರ್ಕಾರದಲ್ಲಿ ದಲಿತರ ಪ್ರಾತಿನಿಧ್ಯ ಹೇಗಿರಲಿದೆ ಎಂದು ನೋಡಬೇಕಿದೆ. ಪರಿಶಿಷ್ಟರಿಗೆ ಮೀಸಲಾದ ಒಟ್ಟು 51 ಕ್ಷೇತ್ರಗಳ ಪೈಕಿ 37ರಲ್ಲಿ ಪಕ್ಷದಿಂದ ಸ್ಪರ್ಧಿಸಿದವರು ಗೆದ್ದಿದ್ದೇವೆ. ಬೇರೆ ಕ್ಷೇತ್ರಗಳಲ್ಲೂ ದಲಿತ ಸಮುದಾಯದ ಮತಗಳು ಫಲಿತಾಂಶದ ಮೇಲೆ ಪರಿಣಾಮ ಬೀರಿವೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸಂಜೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ವೀಕ್ಷಕರು ಬಂದು ಶಾಸಕಾಂಗ ಪಕ್ಷದ ನಾಯಕ ಹೆಸರು ಘೋಷಿಸುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.