ಹೊನ್ನಾಳಿ(ದಾವಣಗೆರೆ ಜಿಲ್ಲೆ) : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೇಸರಿ ಪಡೆ ಸೋಲಲು ಕಾರಣ ಪಕ್ಷದ ವರಿಷ್ಠರ ಕಾರಣ ಎಂದು ರೇಣುಕಾಚಾರ್ಯ ಅಭಿಪ್ರಾಯಪಟ್ಟರು.
ಹೌದು,ಈ ಬಾರಿ ಚುನಾವಣೆಯಲ್ಲಿ ಪಕ್ಷದ ವರಿಷ್ಠರ ತಪ್ಪು ನಿರ್ಧಾರಗಳೇ ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಪ್ರಮುಖ ಕಾರಣ ಎಂದು ದಾವಣಗೆರೆಯ ಹೊನ್ನಾಳಿ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗುಜರಾತ್ ಮಾದರಿಯ ಪ್ರಯೋಗ ನಡೆಸಿದ್ದು ಸೋಲಿಗೆ ಪ್ರಮುಖ ಕಾರಣ, ಪಕ್ಷದ ಹಿರಿಯ ನಾಯಕರನ್ನು ನಿರ್ಲಕ್ಷಿಸಿದ್ದೂ ಮುಳುವಾಯಿತು. ಗೆಲ್ಲಿಸುವ ಶಕ್ತಿ ಇರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ತೆರೆಮರೆಗೆ ಸರಿಸಲಾಯಿತು. ಮೀಸಲಾತಿ ವಿಷಯಕ್ಕೆ ಕೈ ಹಾಕಿದ್ದು ದುರಂತ’ ಎಂದು ಅವರು ತಿಳಿಸಿದರು.
ಇನ್ನೂ ಸರ್ಕಾರ ಪಡಿತರ ವ್ಯವಸ್ಥೆಯಡಿ ನೀಡುತ್ತಿದ್ದ ಅಕ್ಕಿಯನ್ನು 7 ಕೆ.ಜಿ.ಗೆ ಬದಲು 5 ಕೆ.ಜಿ.ಗೆ ಇಳಿಸಿದ್ದು ಬಡಜನರ ಆಕ್ರೋಶಕ್ಕೆ ಕಾರಣವಾಯಿತು. ‘ಬಡವರ ಹೊಟ್ಟೆ ಮೇಲೆ ಹೊಡೆಯಲಾಯಿತು’ ಎಂಬ ಅಭಿಪ್ರಾಯ ಜನರಿಂದ ಕೇಳಿ ಬಂದ ದಿನದಿಂದಲೇ ಬಿಜೆಪಿಗೆ ಸೋಲು ನಿಶ್ಚಿತವಾಯಿತು’ ಎಂದರು.
ಜಾತಿ ಸಮೀಕರಣ ಬಿಜೆಪಿಯಲ್ಲಿ ನಡೆಯಲಿಲ್ಲ. ದಲಿತ ಸಮುದಾಯಕ್ಕೆ ಖರ್ಗೆ, ಕುರುಬ ಸಮಾಜಕ್ಕೆ ಸಿದ್ದರಾಮಯ್ಯ, ವಾಲ್ಮೀಕಿ ಸಮಾಜಕ್ಕೆ ಸತೀಶ್ ಜಾರಕಿಹೊಳಿ ಅವರಂತೆ ಪ್ರತಿ ಸಮುದಾಯದ ನಾಯಕರನ್ನು ಕಾಂಗ್ರೆಸ್‌ನಲ್ಲಿ ಬಿಂಬಿಸಲಾಗಿದೆ. ಈ ರೀತಿ ಬಿಜೆಪಿಯಲ್ಲಿ ನಡೆಯಲಿಲ್ಲ’ ಎಂದು ಅವರು ವಿಶ್ಲೇಷಿಸಿದರು. ‘ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ಗಳು ಜನರ ಮೇಲೆ ಪ್ರಭಾವ ಬೀರಿದವು. ನಮ್ಮ ಸೋಲಿಗೆ ಕಾರಣವಾದವು ಎಂದು ತಿಳಿಸಿದರು.