ಬೆಂಗಳೂರು : ಚುನಾವಣೆಗೂ ಮುನ್ನ ಜನರಿಗೆ ನೀಡಿದ ಉಚಿತ ಗ್ಯಾರಂಟಿಗಳಿಗೆ ಕಾಂಗ್ರೆಸ್ ಪಕ್ಷ ಷರತ್ತು ವಿಧಿಸಲು ನಿರ್ಧರಿಸಿದ್ದು, ಮಾಜಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷ ಎಲ್ಲರಿಗೂ ಗ್ಯಾರಂಟಿಗಳನ್ನು ನೀಡುತ್ತೇವೆ ಎಂದು ಹೇಳಿತ್ತು. ಈಗ ಕೊಟ್ಟ ಭರವಸೆಗಳಿಗೆ ಷರತ್ತು ಅನ್ವಯ ಅಂತ ಹೇಳುತ್ತಿದ್ದಾರೆ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷ ಜನರಿಗೆ 200 ಯುನಿಟ್ ವಿದ್ಯುತ್ ಉಚಿತ, 2000 ರೂ., ನಿರುದ್ಯೋಗ ಭತ್ಯೆ ಅಂತ ಹೇಳಿದೆ. ಈಗ ಎಲ್ಲರಿಗೂ ಕೊಡಲಿ. ಸ್ಪಷ್ಟತೆಯಿಂದ ಎಲ್ಲರಿಗೂ ಮಾತು ಕೊಟ್ಟಿದ್ದಾರೆ ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ.
ಇದನ್ನೂ ಓದಿ : ನಾನು ಕೂಡ ಸಿಎಂ ಸ್ಥಾನದ ಆಕಾಂಕ್ಷಿ : ಜಿ. ಪರಮೇಶ್ವರ್
ಕಾಂಗ್ರೆಸ್ ಹೇಳಿದ್ದನ್ನೇ ಜನ ಪಾಲಿಸ್ತಾರೆ
ಚಿತ್ರದುರ್ಗದಲ್ಲಿ ಗ್ರಾಮಸ್ಥರು ವಿದ್ಯುತ್ ಬಿಲ್ ಕಟ್ಟಲು ನಿರಾಕರಣೆ ಸಂಬಂಧ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಹೇಳಿರುವುದನ್ನು ಜನ ಪಾಲಿಸುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿದ್ಯುತ್ ಬಿಲ್ ಕಟ್ಟುವಂತಿಲ್ಲ ಅಂತ ಹೇಳಿದ್ದರು, ಅದಕ್ಕೆ ಕಟ್ಟುತ್ತಿಲ್ಲ. ನಾವು ಇದನ್ನು ಅಸ್ತ್ರ ಮಾಡಿಕೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ.
ಜೂ.1ರಿಂದ ವಿದ್ಯುತ್ ಬಿಲ್ ಕಟ್ಟಬೇಡಿ
ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಕಾಂಗ್ರೆಸ್ ಪಕ್ಷ 5 ಗ್ಯಾರಂಟಿಗಳನ್ನು ಘೋಷಿಸಿತ್ತು. ಇದರಲ್ಲಿ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ಗ್ಯಾರೆಂಟಿಯೂ ಇತ್ತು. ನಮ್ಮ ಗ್ಯಾರಂಟಿಗಳು ಜಾರಿಗೆ ಬರುವುದು ಶತಸಿದ್ದ. ಜೂನ್ 1ರಿಂದ ಯಾರೂ ವಿದ್ಯುತ್ ಬಿಲ್ ಕಟ್ಟಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಘೋಷಣೆ ಮಾಡಿದ್ದರು.