ಬೆಂಗಳೂರು : ಸಿಎಂ ಪ್ರಬಲ ಆಕಾಂಕ್ಷಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ದೆಹಲಿ ಪ್ರವಾಸ ಕೊನೆಯ ಕ್ಷಣದಲ್ಲಿ ರದ್ದಾಗಿದೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಡಿಕೆಶಿ, ನನಗೆ ಹೊಟ್ಟೆ ಉರಿ ಇದೆ, ಸ್ವಲ್ಪ ಜ್ವರವೂ ಇದೆ. ದೆಹಲಿಗೆ ಹೋಗಲ್ಲ ಎಂದು ಹೇಳಿದ್ದಾರೆ. ಆ ಮೂಲಕ, ದೆಹಲಿ ಪ್ರವಾಸವನ್ನು ಕೊನೆ ಕ್ಷಣದಲ್ಲಿ ರದ್ದು ಪಡಿಸಿದ್ದಾರೆ.
ನನಗೆ ಯಾವ ಶಾಸಕರ ಬೆಂಬಲವೂ ಬೇಕಿಲ್ಲ. ನಮ್ಮ ಬಳಿ 135 ಶಾಸಕರಿದ್ದಾರೆ. ನನಗೆ ಪಕ್ಷವೇ ಮೊದಲು, ಬಣ ರಾಜಕೀಯ ಗೊತ್ತಿಲ್ಲ. ನಾನು ತಾಳ್ಮೆ, ಸಹನೆಯಿಂದ ಇದ್ದೇನೆ. ಮುಂದೆಯೂ ಹಾಗೆಯೇ ಇರುತ್ತೇನೆ. ಕೆಲವರು ಮೈತ್ರಿ ಬಗ್ಗೆ ಯೋಚಿಸುತ್ತಿದ್ದಾಗ ನಾನು 136 ಸಂಖ್ಯೆಯ ಗುರಿಯನ್ನೇ ಇಟ್ಟುಕೊಂಡು ಹೋರಾಟ ಮಾಡಿದ್ದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ನನ್ನ ಬಳಿ ನಂಬರ್ ಇಲ್ಲ, ನಾನು ಏಕಾಂಗಿ : ಟಗರುಗೆ ‘ಟ್ರಬಲ್ ಶೂಟರ್ ಟಕ್ಕರ್’
ನನ್ನನ್ನು ಚಪ್ಪಡಿ, ದಿಂಡು, ಜಲ್ಲಿ ಬೇಕಾದರೂ ಮಾಡಿಕೊಳ್ಳಿ
ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕಾರ ವೇಳೆ ಹೇಳಿಕೆ ನೀಡಿದ್ದೆ. ನನ್ನನ್ನು ಕನಕಪುರದ ಬಂಡೆ ಎಂದು ಕರೆಯುತ್ತಿದ್ದೀರಿ. ನನ್ನನ್ನು ಚಪ್ಪಡಿ ಬೇಕಾದರೂ ಮಾಡಿಕೊಳ್ಳಿ, ದಿಂಡು ಮಾಡಿಕೊಳ್ಳಿ. ಜಲ್ಲಿ ಬೇಕಾದರೂ ಮಾಡಿಕೊಳ್ಳಿ ಎಂದು ಡಿ.ಕೆ ಶಿವಕುಮಾರ್ ಅವರು ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಡಿ.ಕೆ ಶಿವಕುಮಾರ್ ಅವರು ಇಂದು ಸಂಜೆ 7.30ಕ್ಕೆ ಕೆಐಎಬಿಯಿಂದ ದೆಹಲಿ ಪ್ರವಾಸ ಕೈಗೊಳ್ಳಬೇಕಿತ್ತು. ಏರ್ ಇಂಡಿಯಾ ವಿಮಾನದ ಟಿಕೆಟ್ ಬುಕ್ ಆಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ದೆಹಲಿ ಭೇಟಿ ರದ್ದಾಗಿದೆ.