ಬೆಂಗಳೂರು : ನೀವು ನನ್ನನ್ನು ಕನಕಪುರದ ಬಂಡೆ ಎಂದು ಕರೆಯುತ್ತಿದ್ದೀರಿ. ಬಂಡೆ ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೈಕಮಾಂಡ್ ಗೆ ಪರೋಕ್ಷವಾಗಿ ವಾರ್ನಿಂಗ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪೂಜೆ ಪುನಸ್ಕಾರ ಎಲ್ಲಾ ಮಾಡಬೇಕಿದೆ. ನನ್ನ ಯಾವ ಶಾಸಕರನ್ನೂ ಕರೆದುಕೊಂಡು ಹೋಗಲ್ಲ. ನನಗೆ ಯಾರ ಬೆಂಬಲವು ಬೇಡ ಎಂದು ಹೇಳಿದ್ದಾರೆ.
ನನ್ನ ಕರ್ತವ್ಯ ನಾನು ಮಾಡಿದ್ದೀನಿ. ನನ್ನನ್ನ ಬಂಡೆ ಎಂದು ಕರೆದಿದ್ದೀರಾ. ಆಕೃತಿಯಾದ್ರು ಮಾಡಿ, ವಿಧಾನಸೌಧಕ್ಕೆ ಚಪ್ಪಡಿಯಾದ್ರು ಮಾಡಿ, ಮರಳಾದ್ರು ಮಾಡಿ ಗರುಡು ಗಂಬವಾದ್ರು ಮಾಡಿ ಎಂದು ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಇದನ್ನೂ ಓದಿ : ಈಶ್ವರ ಖಂಡ್ರೆಯನ್ನು ‘ಸಿಎಂ ಅಥವಾ ಡಿಸಿಎಂ’ ಮಾಡಿ : ಮಠಾಧೀಶರ ಆಗ್ರಹ
ನಾನೇ ಸಿಎಂ ಆಗಬೇಕೆಂದು ಬಯಕೆ
ಕನಕಪುರ ಬಂಡೆ ಹಾಗೂ ಟಗರು ಸಿದ್ದು ನಡುವೆ ಸಿಎಂ ಸ್ಥಾನಕ್ಕೆ ಭಾರೀ ಫೈಟ್ ಏರ್ಪಟಿದೆ. ಡಿಕೆಶಿ ಭಾವನಾತ್ಮಕ ಟ್ರಂಪ್ ಕಾರ್ಡ್ ಪ್ಲೇ ಮಾಡಿದ್ರೆ, ಇತ್ತ ಸಿದ್ದು ನನಗೆ ಶಾಸಕರ ಬೆಂ’ಬಲ’ ಎಂಬ ಟ್ರಂಪ್ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಮಾತನಾಡಿದ ಅವರು, ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ನನ್ನ ಮತ್ತು ಹೈಕಮಾಂಡ್ ಸಂಬಂಧ ಚೆನ್ನಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ನನ್ನ ಸಂಬಂಧ ಉತ್ತಮವಾಗಿದೆ. ಬಹುತೇಕ ಶಾಸಕರು ನಾನು ಮುಖ್ಯಮಂತ್ರಿ ಆಗಲು ಬಯಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.