ಬೆಂಗಳೂರು : ಬಿಜೆಪಿಯವರು ನಮ್ಮನ್ನ ಕೆಣಕಿ ಮಾತನಾಡುತ್ತಿದ್ದರು. ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಹೇಳುತ್ತಿದ್ದರು. ಆದರೆ ಈಗ ಬಿಜೆಪಿ ಮುಕ್ತ ದಕ್ಷಿಣ ಭಾರತ ನಿರ್ಮಾಣವಾಗಿದೆ. ಅಹಂಕಾರದಿಂದ ಯಾರೇ ಮಾತನಾಡಿದರೂ ಅದು ಬಹಳ ದಿನ ನಡೆಯುವುದಿಲ್ಲ. ಇದು ಪ್ರಜಾಪ್ರಭುತ್ವ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಮೇಕೆದಾಟು ಪಾದಯಾತ್ರೆ ಮೂಲಕ ಪಕ್ಷಕ್ಕೆ ಹೊಸ ಹುರುಪು ಸಿಕ್ಕಿತು. ನಂತರ ಭಾರತ ಐಕ್ಯತಾ ಯಾತ್ರೆಯಿಂದ ಶಕ್ತಿ ಬಂದಿತು. ರಾಹುಲ್ ಗಾಂಧಿ ಅವರು ಸಾಗಿರುವ ಎಲ್ಲಾ ಕ್ಷೇತ್ರಗಳಲ್ಲಿ 90% ಅಭ್ಯರ್ಥಿಗಳು ಗೆದ್ದಿದ್ದಾರೆ. ಇದು ಭಾರತ ಐಕ್ಯತಾ ಯಾತ್ರೆಯ ದೊಡ್ಡ ಸಾಧನೆ ಎಂದರು.
ಇಂದಿನ ಗೆಲುವು ಕರ್ನಾಟಕದ ಜನರ ಗೆಲುವಾಗಿದೆ. ರಾಜ್ಯದ ಜನ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಒಗ್ಗಟ್ಟಾಗಿ ಹರಸಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಣೆಗೆ ಮತ ಚಲಾಯಿಸಿರುವುದಕ್ಕೆ ಕರ್ನಾಟಕದ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಇದನ್ನೂ ಓದಿ : ಕಾಂಗ್ರೆಸ್ ಗೆಲುವು : ಪ್ರಧಾನಿ ಮೋದಿ ಅಭಿನಂದನೆ
ಸಂವಿಧಾನ ರಕ್ಷಣೆಗೆ ಸಿಕ್ಕಿರುವ ಗೆಲುವು
ರಾಜ್ಯ ಉಸ್ತುವಾರಿ ಸುರ್ಜೇವಾಲಾ ಮಾತನಾಡಿ, ಈ ದೇಶದಲ್ಲಿ ಪ್ರಜಾತಂತ್ರ ಉಳಿಸುವ ಹೊಸ ಮಂತ್ರವನ್ನು ಕರ್ನಾಟಕ ರಾಜ್ಯ ನೀಡಿದೆ. ಇದು ಕೇವಲ ಕರ್ನಾಟಕಕ್ಕೆ ಸೀಮಿತವಾದ ಗೆಲುವಲ್ಲ, ಸಂವಿಧಾನ ರಕ್ಷಣೆಗೆ ಇಡೀ ದೇಶಕ್ಕೆ ಸಿಕ್ಕಿರುವ ಗೆಲುವು. ವಿಭಜನೆ, ದ್ವೇಷ, ಜಾತಿ ಧರ್ಮದ ಮೇಲೆ ಒಡೆಯುವ ರಾಜಕಾರಣಕ್ಕೆ ಕನ್ನಡಿಗರು ತಕ್ಕ ಪಾಠ ಕಲಿಸಿದ್ದಾರೆ. ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಬದ್ಧವಾಗಿದ್ದು, ಪಾರದರ್ಶಕ ಆಡಳಿತದ ಮೂಲಕ ಪ್ರತಿ ಕನ್ನಡಿಗರ ಸೇವೆಗೆ ಸಿದ್ಧವಾಗಿದೆ ಎಂದರು.
ಕರ್ನಾಟಕ 40% ಕಮಿಷನ್ ಮುಕ್ತ
ಇಂದು ಕರ್ನಾಟಕ 40% ಕಮಿಷನ್ ಮುಕ್ತವಾಗಿದೆ. ಇದು ಕರ್ನಾಟಕದ ಗೆಲುವು, ಬ್ರಾಂಡ್ ಕರ್ನಾಟಕದ ಗೆಲುವು. ಬಿಜೆಪಿಗರು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದಿದ್ದರು, ಆದರೆ ಕರ್ನಾಟಕದ ಜನತೆ ಬಿಜೆಪಿ ಮುಕ್ತ ದಕ್ಷಿಣ ಭಾರತವನ್ನಾಗಿ ಮಾಡಿದ್ದಾರೆ ಎಂದು ಸುರ್ಜೇವಾಲಾ ಬಿಜೆಪಿಗೆ ಟಕ್ಕರ್ ಕೊಟ್ಟರು.