ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಕೇವಲ ಒಂದೇ ದಿನ ಬಾಕಿ ಉಳಿದಿದ್ದು, ಮತಗಟ್ಟೆ ಸಮೀಕ್ಷೆ ಫಲಿತಾಂಶ ರಾಷ್ಟ್ರೀಯ ಪಕ್ಷಗಳಿಗೆ ಬಿಗ್ ಶಾಕ್ ನೀಡಿದೆ. ಆದ್ರೆ, ಪ್ರಾದೇಶಿಕ ಪಕ್ಷವಾದ ಜೆಡಿಎಸ್ ನಾಯಕರು ಮಾತ್ರ ದಿಲ್ ಕುಶ್ ಆಗಿದ್ದಾರೆ.
ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರು ಫಲಿತಾಂಶಕ್ಕೂ ಮುನ್ನ ಭವಿಷ್ಯ ನುಡಿದಿದ್ದಾರೆ.
ರಾಷ್ಟ್ರೀಯ ಪಕ್ಷಗಳ ಬಳಿ ದುಡ್ಡು ಇದೆ, ನಮ್ಮ ಬಳಿ ಏನೂ ಇಲ್ಲ. ಹಣ ಇರುವುದರಿಂದ ಎರಡೂ ಪಕ್ಷಗಳು ಸರ್ವೆ ಮಾಡಿಸಿಕೊಂಡಿವೆ. ಜನರಲ್ಲಿ ಗೊಂದಲ ಮೂಡಿಸುವ ಕೆಲಸ ರಾಷ್ಟ್ರೀಯ ಪಕ್ಷಗಳು ಮಾಡಿವೆ ಎಂದು ಸಿ.ಎಂ ಇಬ್ರಾಹಿಂ ಹೇಳಿದ್ದಾರೆ.
ಜೆಡಿಎಸ್ ಪಕ್ಷ ಯಾವುದಕ್ಕೂ ಹಿಗ್ಗುವುದಿಲ್ಲ, ಕುಗ್ಗುವುದೂ ಇಲ್ಲ. ನಮ್ಮ ಅಭ್ಯರ್ಥಿಗಳು ಯಾವುದೇ ಆಮಿಷಗಳಿಗೆ ಬಲಿಯಾಗಲ್ಲ. ಕುಮಾರಸ್ವಾಮಿ ಅವರು ಕಿಂಗ್ ಮೇಕರ್ ಆಗುವ ಎಲ್ಲಾ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಒಂದು ವೇಳೆ ಅತಂತ್ರ ಫಲಿತಾಂಶ ಬಂದರೆ ಜೆಡಿಎಸ್ ಯಾವ ಪಕ್ಷದ ಜೊತೆಗೆ ಮೈತ್ರಿಗೆ ಕೈ ಜೋಡಿಸಬಹುದು ಎಂಬ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ.
ಇದನ್ನೂ ಓದಿ : ಹೆಂಡತಿ ಮಕ್ಕಳ ಜೊತೆ ಕಾಲ ಕಳೆಯಿರಿ : ಸಿದ್ದರಾಮಯ್ಯ ಹೀಗೊಂದು ಮನವಿ
ದಳಪತಿಗಳಿಗೆ ಖಡಕ್ ಸೂಚನೆ
ರಾಜ್ಯದಲ್ಲಿ ಅತಂತ್ರ ಚುನಾವಣಾ ಫಲಿತಾಂಶ ಸಾಧ್ಯತೆ ಹಿನ್ನೆಲೆ ಕಾಂಗ್ರೆಸ್ ನಾಯಕರು ಗೆಲ್ಲುವ ಜೆಡಿಎಸ್ ಅಭ್ಯರ್ಥಿಗಳನ್ನು ಸಂಪರ್ಕ ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಗೆಲ್ಲುವ ಜೆಡಿಎಸ್ ಅಭ್ಯರ್ಥಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.
ಜೆಡಿಎಸ್ ಅಭ್ಯರ್ಥಿಗಳು ಯಾವುದೇ ಆಮಿಷಕ್ಕೆ ಒಳಗಾಗಬೇಡಿ, ಸರ್ಕಾರ ರಚನೆಯಲ್ಲಿ ನಾವು ಪ್ರಮುಖ ಪಾತ್ರ ವಹಿಸುತ್ತೇವೆ. ಯಾವುದಕ್ಕೂ ಯಾರು ವಿಚಲಿತರಾಗಬೇಡಿ. ಯಾವುದೇ ರಾಜಕೀಯ ಬೆಳವಣಿಗೆ ಇದ್ದರೂ ತಿಳಿಸಿ ಎಂದು ಕುಮಾರಣ್ಣ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.