ಬೆಂಗಳೂರು : ಮತಗಟ್ಟೆ ಸಮೀಕ್ಷೆ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೇವಾಲಾ ಚರ್ಚೆ ವಿಚಾರ ಕುರಿತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಕೂಡ ಅವರು ಹೊಸ ಕೋಟು ಹೊಲಿಸಿಕೊಂಡಿದ್ದರು. ಆದರೆ, ಹಿಂಬಾಗಿಲಿನಿಂದ ಕುಮಾರಸ್ವಾಮಿ ಸಿಎಂ ಆಗಿದ್ದರು ಎಂದು ಕುಟುಕಿದ್ದಾರೆ.
ನಮ್ಮ ವರದಿ ಪ್ರಕಾರ ಬಿಜೆಪಿಗೆ 120ರಿಂದ125 ಸ್ಥಾನ ಬರುತ್ತದೆ. ಸ್ವಂತ ಬಲದಲ್ಲಿ ನಾವೇ ಸರ್ಕಾರ ರಚನೆ ಮಾಡ್ತೇವೆ. ಬೆಂಗಳೂರಿನಲ್ಲಿ 53% ಮಾತ್ರ ಮತದಾನವಾಗಿದ್ದು ಬೇಸರವಾಗಿದೆ. ರಾಜ್ಯ ಸರ್ಕಾರ ರಜೆ ಘೋಷಣೆ ಮಾಡಿದ್ದರೂ ಮತ ಹಾಕಿಲ್ಲ. ಮುಂದೆ ಆದರೂ ಬೆಂಗಳೂರಿನ ಜನ ಮತ ಹಾಕಲು ಬರಲಿ ಎಂದಿದ್ದಾರೆ.
ಇದನ್ನೂ ಓದಿ : ಎಕ್ಸಿಟ್ ಪೊಲ್ಸ್ ಏನೇ ಹೇಳಿದರೂ ‘ನಾವೇ ಕಿಂಗ್’ ಆಗುತ್ತೇವೆ : ಸಿಎಂ ಬೊಮ್ಮಾಯಿ
ರಿಲ್ಯಾಕ್ಸ್ ಮೂಡ್‍ನಲ್ಲಿ ರಾಮುಲು
ಕಳೆದ ಒಂದು ತಿಂಗಳು ಸತತ ಪ್ರವಾಸ ಕೈಗೊಂಡು ಚುನಾವಣೆ ಪ್ರಚಾರದಲ್ಲಿ ಇನ್ನಿಲ್ಲದಂತೆ ತಮ್ಮನ್ನು ತೊಡಗಿಸಿಕೊಂಡಿದ್ದ ಸಚಿವ ಬಿ.ಶ್ರೀರಾಮುಲು ಅವರು ತಮ್ಮ ನಿವಾಸದಲ್ಲಿ ಇಂದು ರಿಲ್ಯಾಕ್ಸ್ ಮೂಡ್‍ನಲ್ಲಿದ್ದರು. ಬೆಳಿಗ್ಗೆ ಉಪಹಾರ ಸೇವನೆಯ ಬಳಿಕ ಮೊಬೈಲ್‌ನಲ್ಲಿ ಬರುವ ಸಂದೇಶಗಳನ್ನು ಗಮನಿಸುತ್ತಾ, ತಮ್ಮ ಸ್ನೇಹಿತರು, ಹಿತೈಷಿಗಳು ಮತ್ತು ರಾಜಕೀಯ ಸಂಬಂಧಿತ ಗೆಳೆಯರೊಂದಿಗೆ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿದರು.
ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು, ಕ್ಷೇತ್ರದ ಹಲವಾರು ಹಳ್ಳಿಗಳಿಗೆ ತೆರಳಿ ಮತ ಪ್ರಚಾರ ಕೈಗೊಂಡಿದ್ದರು. ಕೌಲ್ ಬಜಾರ್ ಪ್ರದೇಶದ 11 ವಾರ್ಡುಗಳಲ್ಲೂ ಸಹ ಮತ ಪ್ರಚಾರ ಕೈಗೊಂಡು ನಿನ್ನೆಯ ದಿನ ನಡೆದ ಮತದಾನಕ್ಕೆ ಸಂಬಂಧಿಸಿದಂತೆ ಶೇಕಡವಾರು ಅಂಕಿ ಅಂಶಗಳನ್ನು ಅವಲೋಕಿಸಿದರು.