ಬೆಂಗಳೂರು : ನಮ್ಮನ್ನು ಬಿಟ್ಟು ಸರ್ಕಾರ ಮಾಡಲು ಆಗುವುದಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 13ರಂದು ಫಲಿತಾಂಶ ಬಂದ ಬಳಿಕ ನಾವೆಲ್ಲ ಸೇರಿ ಒಟ್ಟಿಗೆ ಮಾತನಾಡುತ್ತೇವೆ. ಅವರು ಹಾಗೆ ಹೇಳೋದ್ರಲ್ಲಿ ತಪ್ಪೇನಿಲ್ಲ. ನೋಡೋಣ ಈ ಫಲಿತಾಂಶ ಬಂದ ನಂತರ ತೀರ್ಮಾನ ಮಾಡೋಣ ಎಂದು ಬಿಎಸ್ ವೈ ಹೇಳಿದ್ದಾರೆ.
ಶಿಕಾರಿಪುರ ಕ್ಷೇತ್ರದಲ್ಲಿ ಪುತ್ರ ಬಿ.ವೈ ವಿಜಯೇಂದ್ರ 40 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ. ರಾಜ್ಯದಲ್ಲಿ ಈ ಸಮೀಕ್ಷೆಗಳು ಏನೇ ಹೇಳಲಿ. 115 ಸೀಟು ಗೆದ್ದು ನಾವು ಸರ್ಕಾರ ರಚನೆ ಮಾಡುತ್ತೇವೆ. ಸರ್ಕಾರ ರಚನೆ ಮಾಡುವ ವಿಶ್ವಾಸ ನನಗಿದೆ ಎಂದು ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : 31 ಸಾವಿರ ಬೂತ್ ಗಳಲ್ಲಿ ಬಿಜೆಪಿಗೆ ಮುನ್ನಡೆ : ಅಂಕಿಅಂಶ ಬಿಚ್ಚಿಟ್ಟ ಬಿ.ಎಲ್ ಸಂತೋಷ್
ಸ್ವಂತ ಶಕ್ತಿ ಮೇಲೆ ಸರ್ಕಾರ ರಚನೆ
ರಾಜ್ಯದ ಉದ್ದಗಲಕ್ಕೂ ನಮ್ಮ ಎಲ್ಲಾ ಮುಖಂಡರೊಂದಿಗೆ ನಾನು ಮಾತನಾಡಿದ್ದೇನೆ. ಎಲ್ಲ ಅಭಿಪ್ರಾಯ ಸಂಗ್ರಹ ಮಾಡಿದ್ದೇನೆ. ಎಸ್ಸಿ-ಎಸ್ಟಿ (SC-ST) ಸಮುದಾಯಕ್ಕೆ ಕೊಟ್ಟಂತಹ ಮೀಸಲಾತಿ ಗಮನಿಸಿದಾಗ ಈ ಸಮೀಕ್ಷೆಗಳಿಗೆ ಆಧಾರ ಇರುವುದಿಲ್ಲ. ನಿಶ್ಚಿತವಾಗಿ ನಾವು 115ಕ್ಕೂ ಹೆಚ್ಚು ಸೀಟು ಗೆದ್ದು ಸ್ವಂತ ಶಕ್ತಿ ಮೇಲೆ ಸರ್ಕಾರ ರಚನೆ ಮಾಡುತ್ತೇವೆ ಎಂದು ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಸಮೀಕ್ಷೆಗಳು ‘ಕೈ’ ಪರವಾಗಿರುವುದು ನಿಜ
ಕಾಂಗ್ರೆಸ್ ನಾಯಕರು ಏನೇ ಹೇಳಲಿ ಅದಕ್ಕೆ ನಾನು ಟೀಕೆ ಮಾಡುವುದಿಲ್ಲ. ಮತಗಟ್ಟೆ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷದ ಪರವಾಗಿ ಕೊಟ್ಟಿದ್ದು ನಿಜ. ಒಂದೆರಡು ಸಮೀಕ್ಷೆಗಳು ನಮ್ಮ ಪರವಾಗಿಯೂ ಇವೆ. ಇದೆಲ್ಲವನ್ನು ನೋಡಿಕೊಂಡು ನಾಡಿದ್ದು ನಡೆಯುವ ಮತ ಎಣಿಕೆಯಲ್ಲಿ ನಾವು 115ಕ್ಕೂ ಹೆಚ್ಚು ಸೀಟು ಗೆಲ್ಲುತ್ತೇವೆ ಎಂದು ಪುನರುಚ್ಚರಿಸಿದ್ದಾರೆ.