Wednesday, January 22, 2025

ಧೀರಜ್ ಮುನಿರಾಜು ಪರ ಕಿಚ್ಚ ಸುದೀಪ್ ಅಬ್ಬರದ ಪ್ರಚಾರ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿಯಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ನಟ ಕಿಚ್ಚ ಸುದೀಪ್ ಅವರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ನಟ ಸುದೀಪ್ ಅವರು ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಪರ ರೋಡ್ ಶೋ ಕೈಗೊಂಡರು.

ಆರೋಗ್ಯ ಸಚಿವ ಹಾಗೂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್, ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಬೃಹತ್‌ ಮೆರವಣಿಗೆಯ ಮೂಲಕ ಧೀರಜ್ ಮುನಿರಾಜು ಪರ ಮತ ಬೇಟೆ ನಡೆಸಿದರು.

ಕಮಲ ಅರಳುವುದನ್ನ ಸಾರಿ ಹೇಳುತ್ತೆ

ಈ ವೇಳೆ ಮಾತನಾಡಿರುವ ಆರೋಗ್ಯ ಸಚಿವ ಡಾ.ಕೆ ಸುಧಾಕರ ಅವರು, ಬಿಜೆಪಿ ಬೆಂಬಲಿಸಿ ಸೇರಿದ್ದ ಅಪಾರ ಜನಸ್ತೋಮ ಈ ಬಾರಿ ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿಯಲ್ಲಿ ಕಮಲ ಅರಳುವುದನ್ನು ಸಾರಿ ಹೇಳುತ್ತಿತ್ತು. ಬಿಜೆಪಿ ಸರ್ಕಾರದಿಂದ ಮಾತ್ರ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಇದನ್ನೂ ಓದಿ : ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ : ಧೀರಜ್ ಮುನಿರಾಜು

ಬಿಜೆಪಿಗೆ ಸ್ಪಷ್ಟ ಜನಾದೇಶ ನಿಶ್ಚಿತ

ಬಿಜೆಪಿ ಪಕ್ಷಕ್ಕೆ ಜನರ ಅಭಿಪ್ರಾಯ ಸರ್ವ ಸಮ್ಮತವಾಗುತ್ತಿದ್ದು ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಜನಾದೇಶದೊಂದಿಗೆ ನಾಡಿನ ಸೇವೆಗೆ ಮರಳಲಿದೆ. ವಿದ್ಯಾನಿಧಿ ಯೋಜನೆ, ನೇಕಾರ ಸಮ್ಮಾನ್, ರೈತ ಸಮ್ಮಾನ್, ಬಡ್ಡಿರಹಿತ ಸಾಲ ಹೀಗೆ ಹಲವು ಯೋಜನೆಗಳ ಮೂಲಕ ನೇಕಾರರು, ರೈತರು ಸೇರಿದಂತೆ ಎಲ್ಲ ವರ್ಗಗಳ ಹಿತ ಕಾಯುತ್ತಿದ್ದೆ ನಮ್ಮ ಡಬಲ್ ಎಂಜಿನ್ ಬಿಜೆಪಿ‌ ಸರ್ಕಾರ ಎಂದು ಹೇಳಿದರು.

ಈ ವೇಳೆ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಪಿಳ್ಳಮುನಿಶಾಮಪ್ಪ, ಧೀರಜ್ ಮುನಿರಾಜು, ಎಂಎಲ್ ಸಿ ಛಲವಾದಿ ನಾರಾಯಣಸ್ವಾಮಿ ಹಾಗೂ ಇತರ ಮುಖಂಡರು ಭಾಗವಹಿಸಿದ್ದರು.

ಸುಧಾಕರ್ ಪರ ಕಿಚ್ಚನ ಪ್ರಚಾರ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಅವರ ಪರ ನಟ ಕಿಚ್ಚ ಸುದೀಪ್ ಇಂದು ಚಿಕ್ಕಬಳ್ಳಾಪುರದಲ್ಲಿ ಪ್ರಚಾರ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ಮಂಚೇನಹಳ್ಳಿಯಲ್ಲಿ ನಡೆಯುವ ರೋಡ್ ಶೋನಲ್ಲಿ ಸುದೀಪ್ ಭಾಗಿಯಾಗಲಿದ್ದಾರೆ. ನಂತರ ಚಿಕ್ಕಬಳ್ಳಾಪುರ ನಗರದಲ್ಲಿ ಸಂಜೆ 5.30ಕ್ಕೆ ರೋಡ್ ಶೋ ನಡೆಯಲಿದೆ.

RELATED ARTICLES

Related Articles

TRENDING ARTICLES