Monday, December 23, 2024

ಜೆಡಿಎಸ್ ಶಾಲು ಹಾಕ್ಕೊಂಡು ‘ಕೈ’ ಪರ ಪ್ರಚಾರ ಮಾಡು ಅಂದ್ರು : ರಘು ಆಚಾರ್ ಹೊಸ ಬಾಂಬ್

ಬೆಂಗಳೂರು : ಜೆಡಿಎಸ್ ಪಕ್ಷದ ಶಾಲು ಹಾಕಿಕೊಂಡು ಕಾಂಗ್ರೆಸ್ ಪರ ಪ್ರಚಾರ ಮಾಡಿ ಅಂತಾ ಆಮಿಷ ಒಡ್ಡಿದರು ಎಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ರಘು ಆಚಾರ್ ಹೊಸ ಬಾಂಬ್ ಸಿಡಿಸಿದ್ದಾರೆ.

ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಹೈ ಕಮಾಂಡ್ ನನಗೆ ಆಫರ್ ನೀಡುತ್ತಿದ್ದು, ಪಕ್ಷಕ್ಕೆ ವಾಪಸ್ ಬಂದರೆ ಕೇಳಿದ ಸ್ಥಾನಮಾನ ನೀಡುತ್ತೇವೆ ಅಂತಾ ಆಹ್ವಾನ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡ ಹನುಮಲಿ ಷಣ್ಮುಖಪ್ಪ ನಮ್ಮ ಮನೆಗೆ ಬಂದಿದ್ದರು. ಹೈ ಕಮಾಂಡ್ ಸೂಚನೆ  ಮೇರೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎಲ್ಲರೂ ಮಾತನಾಡಿದ್ದಾರೆ ಎಂದು ಜಿ.ರಘು ಆಚಾರ್ ತಿಳಿಸಿದ್ದಾರೆ.

ನಾನು ಕೈ ಆಮಿಷಕ್ಕೆ ಸೊಪ್ಪು ಹಾಕಲ್ಲ

ನೀವು ಕಾಂಗ್ರೆಸ್ ಪಕ್ಷಕ್ಕೆ ಬನ್ನಿ. ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಶಾಲು ಹಾಕಿಕೊಂಡು ಕಾಂಗ್ರೆಸ್ ಪರ ಪ್ರಚಾರ ಮಾಡಿ ಎಂದು ಆಮಿಷ ಒಡ್ಡಿದರು. ಆದರೆ, ನಾನು ಇಂಥದಕ್ಕೆ ಸೊಪ್ಪು ಹಾಕುವುದಿಲ್ಲ. ನಾನು ಚಿತ್ರದುರ್ಗದ ಜನರ ನಿರ್ಧಾರಕ್ಕೆ ತಲೆಬಾಗಿ ಚುನಾವಣೆಗೆ ನಿಂತಿದ್ದೇನೆ. ಈ ಬಾರಿ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಮದುವೆ ಮನೆಗೆ ತೆರಳಿ ಮತ ಯಾಚಿಸಿದ ರಘು ಆಚಾರ್

ನನ್ನ ತಂಗಿಗೆ ಬೆದರಿಕೆ ಹಾಕಿದ್ದಾರೆ

ಚಿತ್ರದುರ್ಗದಲ್ಲಿ ಈ ಹಿಂದೆ ನಾನು ಪ್ರಚಾರಕ್ಕೆ ತೆರಳಿದ್ದ ವೇಳೆ ಅಡ್ಡಗಟ್ಟಿ ಪ್ರಚಾರಕ್ಕೆ ಅಡ್ಡಿಪಡಿಸಿದ್ದರು. ಮೊನ್ನೆ ನಮ್ಮ ವಾಹನಕ್ಕೆ ಡಿಕ್ಕಿ ಹೊಡೆಸಿ ಗಲಾಟೆ ಮಾಡಿದ್ದರು. ನಿನ್ನೆ ದಿವಸ ಪ್ರಚಾರಕ್ಕೆ ತೆರಳಿದ್ದ ನನ್ನ ತಂಗಿ ಹಾಗೂ ಪತ್ನಿಗೆ ನಗರಸಭೆ ಸದಸ್ಯ ಮಲ್ಲಿಕಾರ್ಜುನ್ ಎಂಬ ವ್ಯಕ್ತಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುವುದು ಒಳ್ಳೆಯದಲ್ಲ. ಹೀಗೆ ಮುಂದುವರಿದರೆ ನಾನು ಮದಕರಿ ನಾಯಕರಂತೆ ನಿಲ್ಲಬೇಕಾಗುತ್ತದೆ. ಸದ್ಯದಲ್ಲೇ ನಾನು ಬೆದರಿಕೆ ಹಾಕಿದ ನಗರಸಭೆ ಸದಸ್ಯರ ವಾರ್ಡ್ ನಲ್ಲೇ ಅದ್ದೂರಿ ಪ್ರಚಾರ ಮಾಡುತ್ತೇನೆ ಎಂದು ಜಿ.ರಘು ಆಚಾರ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ತಿಮ್ಮಣ್ಣ, ಯುವ ಘಟಕದ ಜಿಲ್ಲಾಧ್ಯಕ್ಷ ಪ್ರತಾಪ್ ಜೋಗಿ, ರಾಜ್ಯ ಕಾರ್ಯದರ್ಶಿ ಎಸ್.ಶಿವಪ್ರಸಾದ್, ಅನಿಲ್, ಪುನೀತ್ ಹಾಜರಿದ್ದರು.

RELATED ARTICLES

Related Articles

TRENDING ARTICLES