ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ್ದ ಚುನಾವಣಾ ಪ್ರಣಾಳಿಕೆಯ ಪ್ರತಿಯನ್ನು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸುಟ್ಟುಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ರಾಷ್ಟ್ರ ದ್ರೋಹಿಯಾಗಿದ್ದು, ಕೂಡಲೇ ಈ ಪ್ರಣಾಳಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಪಿಎಫ್ ಐ(PFI) ಮೇಲಿದ್ದ 173 ಪ್ರಕರಣ ಹಿಂಪಡೆದಿದೆ. ಭಯೋತ್ಪಾದಕ ಚಟುವಟಿಕೆಗಳಿಗೆ ಕಾಂಗ್ರೆಸ್ ಬೆಂಬಲ ನೀಡಿತ್ತು. ದೇಶದಲ್ಲಿ ಪಿಎಫ್ ಐ(PFI) ಬ್ಯಾನ್ ಆಗಿದೆ ಅನ್ನೋದೆ ಕಾಂಗ್ರೆಸ್‌ಗೆ ಗೊತ್ತಿಲ್ಲ. ಬಿಜೆಪಿ ಸರ್ಕಾರ ರಾಷ್ಟ್ರದ್ರೋಹಿ ಪಿಎಫ್ ಐ(PFI)ಸಂಘಟನೆಯನ್ನು ಬ್ಯಾನ್ ಮಾಡಿದೆ ಎಂದು ಕುಟುಕಿದ್ದಾರೆ.
ಇದನ್ನೂ ಓದಿ : ಬಿಜೆಪಿ ‘ಪ್ರಜಾ ಪ್ರಣಾಳಿಕೆ’ ಜನರಿಗೆ ಇಷ್ಟವಾಗಿದೆ : ಸಚಿವ ಬಿ.ಸಿ ಪಾಟೀಲ್
ಕಾಂಗ್ರೆಸ್ ಪಕ್ಷ ಬಜರಂಗದಳ ಮುಟ್ಟಿದ್ದರಿಂದ ಅಧಿಕಾರ ಕಳೆದುಕೊಳ್ಳುತ್ತದೆ. ವಿರೋಧ ಪಕ್ಷದ ಸ್ಥಾನ ಪಡೆಯುವಷ್ಟು ಕ್ಷೇತ್ರಗಳನ್ನು ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವುದಿಲ್ಲ ಎಂದು ಪ್ರಣಾಳಿಕೆ ಪ್ರತಿ ಸುಟ್ಟು ಕಿಡಿಕಾರಿದ್ದಾರೆ.
ಭಯೋತ್ಪಾದನೆಗೆ ಕುಮ್ಮಕ್ಕು
ಬಜರಂಗದಳ ಬ್ಯಾನ್ ಮಾಡ್ತೀವಿ ಅಂದಿದ್ದು ನೋವಾಗಿದೆ. ಕಾಂಗ್ರೆಸ್‌ನವರ ಮನಸ್ಥಿತಿ ರಾಜ್ಯದ ಜನರಿಗೆ ಗೊತ್ತಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ. ಜಾತಿ ಹೆಸರಲ್ಲಿ ಮತ ಕೇಳಲು ಕಾಂಗ್ರೆಸ್‌ಗೆ ಯಾವುದೇ ನೈತಿಕತೆ ಇಲ್ಲ. ಎಲ್ಲಾ ರಾಷ್ಟ್ರ ಭಕ್ತರು ಪ್ರಣಾಳಿಕೆಯನ್ನು ಬಹಿಷ್ಕರಿಸಬೇಕು ಎಂದು ಕೆ.ಎಸ್.ಈಶ್ವರಪ್ಪ ಕೆಂಡಾಮಂಡಲರಾಗಿದ್ದಾರೆ.