ಹಾವೇರಿ : ಕಾಂಗ್ರೆಸ್ ಪಕ್ಷಕ್ಕೆ ಇದು ಕೊನೆ ಚುನಾವಣೆ. ಸೋತರೆ ಅವರು ಸೀದಾ ಮನೆಗೆ ಹೋಗುತ್ತಾರೆ ಎಂದು ಮುಖ್ಯಮಂತ್ರಿ ಹಾಗೂ ಶಿಗ್ಗಾಂವಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಹಾನಗಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಅವರ ಪರವಾಗಿ ರೋಡ್ ಶೋ ನಡೆಸಿ ಮಾತನಾಡಿದರು. ಅವರಿಗೆ ಇದು ಮಾಡು ಇಲ್ಲವೇ ಮಡಿ ಪರಿಸ್ಥಿತಿ. ಆದರೆ, ಅವರಿಗೆ ಇದು ಮಡಿಯುವ ಚುನಾವಣೆ ಎಂದು ಹೇಳಿದರು.
ಈ ಬಾರಿ ಬಿಜೆಪಿ ಸುನಾಮಿ ಕರ್ನಾಟಕದಲ್ಲಿದೆ. ಹಾನಗಲ್ ತಾಲ್ಲೂಕು ಯಾವಾಗಲೂ ರಾಜಕೀಯ ಪ್ರಜ್ಞೆ ಇರುವ ಕ್ಷೇತ್ರ. ಇಲ್ಲಿ ಆರಿಸಿ ಬರುವುದು ಪ್ರಜಾಪ್ರಭುತ್ವದ ಪರೀಕ್ಷೆ. ನಮ್ಮ ಉದಾಸಿ ಅಣ್ಣ ಇದ್ದಾಗ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಈಗ ಇದನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕು ಎಂದು ಸಿಎಂ ಬೊಮ್ಮಾಯಿ ಕರೆ ನೀಡಿದರು.
ಇದನ್ನೂ ಓದಿ : ಇದು ‘ಸಿದ್ದರಾಮಯ್ಯರ ಕೊನೆ ಚುನಾವಣೆ’, ಪ್ಲೀಸ್.. ಗೆಲ್ಲಿಸಿ
ಉದಾಸಿ ಅಣ್ಣನ ಋಣ ತೀರಿಸಬೇಕು
ಎಂಜಿನ್ ಸರ್ಕಾರ ಕರ್ನಾಟಕದ ಅಭಿವೃದ್ಧಿಗೆ ಬಹಳ ದೊಡ್ಡ ಕೊಡುಗೆ ನೀಡಿದೆ. ಉದಾಸಿ ಅವರು 2018 ಗೆದ್ದ ಮೇಲೆ ಇಲ್ಲಿನ ಕೆರೆ ತುಂಬಿಸುವಂತೆ ಬಹಳವಾಗಿ ಹೇಳುತ್ತಿದ್ದರು. ಈ ಮೂಲಕ 4 ನೀರಾವರಿ ಯೋಜನೆಗಳನ್ನು ಜಾರಿಗೆ ತಂದರು. ಉದಾಸಿ ಅಣ್ಣನ ಋಣ ತೀರಿಸಲು, ಅವರ ಗೌರವ ಎತ್ತಿಹಿಡಿಯಲು ಶಿವರಾಜ್ ಸಜ್ಜನರ್ ಅವರನ್ನು ಗೆಲ್ಲಿಸಿ ತರಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.
54 ಲಕ್ಷ ರೈತರಿಗೆ 16,000 ಕೋಟಿ ರೂ.
ನಾನು ಸಿಎಂ ಆಗಿ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇನೆ. ಹಾನಗಲ್ ತಾಲೂಕಿನಲ್ಲಿ 8 ಸಾವಿರ ರೈತರ ಮಕ್ಕಳಿಗೆ ವಿದ್ಯಾನಿಧಿ ಸಿಕ್ಕಿದೆ. ನಮ್ಮ ಪ್ರಧಾನ ಮಂತ್ರಿಗಳು ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ 54 ಲಕ್ಷ ರೈತರಿಗೆ 16,000 ಕೋಟಿ ರೂ. ನೇರ ಹಣ ವರ್ಗಾವಣೆ ಮಾಡಿದ್ದಾರೆ. ಪ್ರಧಾನಮಂತ್ರಿ ಆವಾಸ್ ಯೊಜನೆ ಅಡಿಯಲ್ಲಿ ಎಲ್ಲ ಬಡವರಿಗೂ ಸೂರು ಕಲ್ಪಿಸಲಾಗುತ್ತಿದೆ. ಅವರಿಗೆ ಬೆಳಕು ಯೋಜನೆ ಅಡಿಯಲ್ಲಿ ವಿದ್ಯುತ್ ನೀಡಲಾಗಿದೆ ಎಂದರು.
ರಾಜ್ಯದಲ್ಲಿ 13 ಲಕ್ಷ ಉದ್ಯೊಗ ಸೃಷ್ಟಿ
ನಾನು ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇನೆ. ಇದರಿಂದ ರೈತರ ಮಕ್ಕಳು ಉನ್ನತ ಶಿಕ್ಷಣ ಕಲಿತು ಅಧಿಕಾರಿಗಳಾಗಬೇಕು ಎನ್ನುವುದು ಇದರ ಹಿಂದಿನ ಉದ್ದೇಶ. ಇದರೊಂದಿಗೆ ಅನೇಕ ಇತರೆ ಯೋಜನೆಗಳನ್ನೂ ಜಾರಿಗೆ ತಂದಿದ್ದೀವಿ. ನಾವು ದುಡಿಮೆಗೆ ಬೆಲೆ ಕೊಡುವ ಕೆಲಸ ಮಾಡಿದ್ದೇವೆ. ರಾಜ್ಯದಲ್ಲಿ ಪ್ರತಿ ವರ್ಷ 13 ಲಕ್ಷ ಉದ್ಯೊಗ ಸೃಷ್ಟಿ ಆಗಿವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.