Wednesday, January 22, 2025

‘ಏಳು ಸುತ್ತಿನ ಕೋಟೆ’ ರೀತಿ ಜನರಿಗೆ ‘ಏಳು ಸುತ್ತಿನ ಸುರಕ್ಷತೆ’ ನೀಡಿದ್ದೇವೆ : ಪ್ರಧಾನಿ ಮೋದಿ

ಚಿತ್ರದುರ್ಗ : ‘ವೀರ ಮದಕರಿ ನಾಯಕ, ಒನಕೆ ಓಬವ್ವ’ ಅವರ ಶೌರ್ಯದ ನಾಡಾದ ಕೋಟೆನಾಡು ಚಿತ್ರದುರ್ಗದ ಜನತೆಗೆ ನನ್ನ ನಮಸ್ಕಾರಗಳು’ ಎಂದು ಕನ್ನಡದಲ್ಲೇ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭಿಸಿದರು.

ಕಲ್ಲಿನಕೋಟೆಯಲ್ಲಿ ಕೇಸರಿ ಕಲರವ ಮೊಳಗಿದ್ದು, ತಮಟೆ ಬಾರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶ ಉದ್ಘಾಟಿಸಿದರು.

ಚಿತ್ರದುರ್ಗದಲ್ಲಿ ಕೇಳಿಬರುತ್ತಿರುವ ಈ ಸದ್ದು ಬಹಳ ದೂರು ದೂರುತನಕ ಕೇಳಬೇಕು. ಈ ಬಾರಿಯ ನಿರ್ಧಾರ..ಈ ಬಾರಿಯ ನಿರ್ಧಾರ..’ಬಹುಮತದ ಬಿಜೆಪಿ ಸರ್ಕಾರ’. ಆಜಾದಿ ಕಾ ಅಮೃತ್​ ಮಹೋತ್ಸವದಲ್ಲಿ ಇದು ಕರ್ನಾಟಕದ ಮೊದಲ ಚುನಾವಣೆಯಾಗಿದೆ. ರಾಜ್ಯವನ್ನು ದೇಶದಲ್ಲೇ ನಂಬರ್​​ ಒನ್​ ಮಾಡುವ ಚುನಾವಣೆ. ಮುಂದಿನ 25 ವರ್ಷಗಳಲ್ಲಿ ರಾಜ್ಯ ಸಾಕಷ್ಟು ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.

ಅತ್ಯುತ್ತಮ ಚುನಾವಣಾ ಪ್ರಣಾಳಿಕೆಯನ್ನು ಘೋಷಿಸಿದ್ದಕ್ಕಾಗಿ ನಾನು ಕರ್ನಾಟಕ ಬಿಜೆಪಿಯನ್ನು ಅಭಿನಂದಿಸುತ್ತೇನೆ. ಕರ್ನಾಟಕವನ್ನು ಎಲ್ಲ ರೀತಿಯಲ್ಲೂ ಭಾರತದ ನಂಬರ್-1 ರಾಜ್ಯವನ್ನಾಗಿ ಮಾಡಲು ಬೇಕಾದ ನೀಲನಕ್ಷೆಯನ್ನು ರೂಪಿಸಲಾಗಿದೆ ಎಂದು ಬಿಜೆಪಿ ಪ್ರಜಾ ಪ್ರಣಾಳಿಕೆಯ ಬಗ್ಗೆ ಪ್ರಧಾನಿ ಮೋದಿ ಕೊಂಡಾಡಿದರು.

ನಂ.1 ಮಾಡುವ ಬ್ಲೂ ಪ್ರಿಂಟ್‌ ರೆಡಿ

ಮುಂದಿನ 25 ವರ್ಷದ ಭವಿಷ್ಯ ನಿರ್ಧರಿಸುವ ಪ್ರಣಾಳಿಕೆ ರಾಜ್ಯ ಬಿಜೆಪಿ ಬಿಡುಗಡೆ ಮಾಡಿದೆ. ಕರ್ನಾಟಕವನ್ನು ಅಭಿವೃದ್ಧಿಯ ಮಷಿನ್ ಮಾಡಬೇಕಾಗಿದೆ. ಕರ್ನಾಟಕವನ್ನು ನಂ.1 ಮಾಡುವ ಬ್ಲೂ ಪ್ರಿಂಟ್‌ ರೆಡಿಯಾಗಿದೆ. ಶೋಷಿತರಿಗೆ, ಹಿಂದುಳಿದವರು, ದಲಿತರು ಸೇರಿ ಎಲ್ಲರಿಗೂ ಬಿಜೆಪಿ ಅಭಿವೃದ್ಧಿಯ ಭರವಸೆ ನೀಡಿದೆ ಎಂದು ಹೇಳಿದರು.

7 ಸುತ್ತಿನ ಕೋಟೆ ರೀತಿ 7 ಯೋಜನೆ

ಚಿತ್ರದುರ್ಗವನ್ನು ಏಳು ಸುತ್ತಿನ ಕೋಟೆ ಎಂದು ಕರೆಯಲಾಗುತ್ತದೆ. ಅದರಂತೆ, ಸುತ್ತಿನ ಕೋಟೆ ರೀತಿ 7 ಸುರಕ್ಷಾ ಕೋಟೆ ಯೋಜನೆಗಳನ್ನು ಬಿಜೆಪಿ ಜಾರಿಗೆ ತಂದಿದೆ. ಮೊದಲನೆಯದು ಪಿಎಂ ಆವಾಸ್​ ಯೋಜನೆ, ಗ್ಯಾಸ್​​, ನೀರು. ಎರಡನೇ ಯೋಜನೆ ಪ್ರತಿ ಮನೆಗೂ ರೇಷನ್​​​, ಮೂರನೇ ಯೋಜನೆ ಆಯುಷ್ಮಾನ್​ ಭಾರತ್​ ಯೋಜನೆ. ನಾಲ್ಕನೇ ಯೋಜನೆ ಮುದ್ರಾ ಯೋಜನೆ, ಐದನೇ ಯೋಜನೆ ಬೀಮಾ ಯೋಜನೆ, ಆರನೇ ಯೋಜನೆ ಮಹಿಳೆಯರಿಗೆ ಸುರಕ್ಷೆ, ಏಳನೇದಾಗಿ ಜನದನ್​ ಯೋಜನೆ ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.

ಚಿತ್ರದುರ್ಗ ಹೆದ್ದಾರಿಗಳಿಗೆ 3,500 ಕೋಟಿ

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಧಿಕಾರದಲ್ಲಿ ಇರುವವರೆಗೂ ಪ್ರತಿಯೊಂದು ಯೋಜನೆ ವಿಳಂಬವಾಗುತ್ತಿತ್ತು. ಆದರೆ, ಬಿಜೆಪಿ ಸರ್ಕಾರವು ಈ ಯೋಜನೆಗಳನ್ನು ವೇಗವಾಗಿ ಮತ್ತು ಹೆಚ್ಚಿನ ಅನುದಾನ ನೀಡುವ ಮೂಲಕ ಪೂರ್ಣಗೊಳಿಸುವ ಕೆಲಸ ಮಾಡಿದೆ. 3,500 ಕೋಟಿಗೂ ಹೆಚ್ಚು ಹಣವನ್ನು ಚಿತ್ರದುರ್ಗ ಜಿಲ್ಲೆಯ ಹೆದ್ದಾರಿಗಳಿಗೆ ವೆಚ್ಚ ಮಾಡಿದ್ದೇವೆ. ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೆ ಮಾರ್ಗಕ್ಕೆ ಕೆಲಸಕ್ಕೆ ಹಣ ಬಿಡುಗಡೆ ಮಾಡಿ ಕೆಲಸ ಚಾಲ್ತಿ ಮಾಡಿದ್ದೇವೆ ಎಂದು ಪ್ರಧಾನಿ ಪ್ರಸ್ತಾಪಿಸಿದರು.

ಯುವಜನತೆಗೆ ಉದ್ಯೋಗಾವಕಾಶ ಸೃಷ್ಟಿ

ಕರ್ನಾಟಕದಲ್ಲಿ 9 ಕೈಗಾರಿಕಾ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. ಅದರಲ್ಲಿ ಒಂದನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಸ್ಥಾಪಿಸಲಾಗುತ್ತಿದ್ದು, ಇದು ಈ ಜಿಲ್ಲೆಯ ಯುವಜನತೆಗೆ ಹಲವು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಬಿಜೆಪಿ ಡಬಲ್ ಎಂಜಿನ್ ಸರ್ಕಾರ ಬಡವರ ಮಕ್ಕಳಿಗೆ ಉಪಯುಕ್ತವಾಗುವಂತೆ, ಕನ್ನಡದಲ್ಲಿಯೂ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಪದವಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದೆ ಎಂದು ಪ್ರಧಾನಿ ಮೋದಿ ಹೇಳಿದರು.

 

RELATED ARTICLES

Related Articles

TRENDING ARTICLES