Sunday, December 22, 2024

ಸಿದ್ದ’ರಾಮ’ಯ್ಯಗೆ ‘ರಾಮ ಬೇಕು ಆಂಜನೇಯ’ ಬೇಡ್ವೇ? : ಬಿ.ಸಿ ಪಾಟೀಲ್ ಕಿಡಿ

ಬೆಂಗಳೂರು : ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ಪ್ರಸ್ತಾಪ ಕುರಿತು ಕೃಷಿ ಸಚಿವ ಹಾಗೂ ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ್ ‘ಕೈ’ ನಾಯಕರ ವಿರುದ್ಧ ಕಿಡಿಕಾರಿದರು.

ಹಿರೇಕೆರೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಬಿ.ಸಿ ಪಾಟೀಲ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತನ್ನ ಹೆಸರಲ್ಲಿ ರಾಮ ಅಂತಾ ಹೆಸರಿದೆ ಅಂತಾ ಹೇಳುತ್ತಾರೆ. ಆದ್ರೆ, ಆಂಜನೇಯ ಬೇಡ ಅಂತಾ ಹೇಳಿದ್ರೆ ಹೇಗೆ? ಎಂದು ಪ್ರಶ್ನಿಸಿದರು.

ಆಂಜನೇಯ ಬೇಡ ಅಂದ್ರೆ ರಾಮ ಇರಲು ಸಾಧ್ಯವೆ? ರಾಮನ ಪರಮ ಭಕ್ತ ಆಂಜನೇಯ. ಭಜರಂಗದಳ ಆಂಜನೇಯನ‌ ಒಂದು ಗುರುತು. ಪಿಎಪ್ ಐ ಈಗಾಗಲೇ ಬ್ಯಾನ್ ಆಗಿದೆ. ಡೈವರ್ಸ್ ಆಗಿದ್ದನ್ನು ಮತ್ತೆ ಡೈವರ್ಸ್ ಮಾಡ್ತಿವಿ ಅಂತಾ ಹೇಳಿದಂಗಿದು. ಭಜರಂಗದಳ ಬ್ಯಾನ್ ಮಾಡ್ತಿವಿ ಎನ್ನೋದು ಎಷ್ಟು ಸರಿ ಎಂದು ಗುಡುಗಿದರು.

ಭಜರಂಗದಳ ನಿಷೇಧಿಸಲು ಇವರ್ಯಾರು?

ಭಾರತ ಹಿಂದೂ ದೇಶ, ಹಿಂದೂ ರಾಷ್ಟ್ರ. ರಾಮನ ಮಂದಿರ ಕಟ್ಟುತ್ತಿದ್ದೇವೆ. ಭಜರಂಗದಳ ಕಾರ್ಯಕರ್ತರು ಹಿಂದೂ ಧರ್ಮ ರಕ್ಷಣೆ ಮಾಡುತ್ತಿದ್ದಾರೆ, ಕಾಯುತ್ತಿದ್ದಾರೆ. ಒಳಮೀಸಲಾತಿ ರದ್ದು ಮಾಡ್ತಿವಿ ಅಂತಾರೆ, ಹಾಗಾದ್ರೆ ಯಾರಿಗೂ ಸಾಮಾಜಿಕ ನ್ಯಾಯ ಬೇಡ್ವಾ? ಭಜರಂಗದಳ ನಿಷೇದ ಮಾಡಲು ಇವರು ಯಾರು? ಎಂದು ಸಚಿವ ಬಿ.ಸಿ ಪಾಟೀಲ್ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ : ನನ್ನ ಏಳಿಗೆ ಸಹಿಸದವರು ಅಪಪ್ರಚಾರ ಮಾಡ್ತಿದ್ದಾರೆ : ಬಿ.ಸಿ ಪಾಟೀಲ್

ನಿಷೇಧ ಮಾಡೋ ತಾಕತ್ತು ಇದ್ಯಾ?

ಕಾಂಗ್ರೆಸ್ ನವರು ಆಡಳಿತಕ್ಕೆ ಬಂದ್ರೆ ತಾನೆ. ಇವರು ಆಡಳಿತಕ್ಕೆ ಬರಲ್ಲ, ನಾವೆ ಆಡಳಿತಕ್ಕೆ ಬರೋದು. ಬಿಜೆಪಿ ಪಕ್ಷಕ್ಕೆ 135ಕ್ಕಿಂತ ಹೆಚ್ಚು ಸೀಟು ಬರುತ್ತೆ. ನಾವು ಆಡಳಿತಕ್ಕೆ ಬಂದೇ ಬರ್ತಿವಿ. ಭಜರಂಗದಳ ನಿಷೇಧ ಮಾಡುವ ತಾಕತ್ತು ಇವರಿಗೆ ಇಲ್ಲ. ಅಂದ್ರೆ ಹಿಂದೂಗಳನ್ನ ಈ ರಾಷ್ಟ್ರ ಬಿಟ್ಟು ಓಡಿಸಬೇಕು ಅಂತಿದೀರಾ? ಹಿಂದೂ ಧರ್ಮವನ್ನು ದೇಶದಿಂದ ಕಿತ್ತೊಗೆಯಬೇಕು ಅಂತಿದ್ದೀರಾ? ಎಂದು ಕೈ ನಾಯಕರಿಗೆ ಪ್ರಶ್ನೆ ಮಾಡಿದರು.

ಹಿರೇಕೆರೂರು ಮತಕ್ಷೇತ್ರದ ಬಹುತೇಕ ಎಲ್ಲಾ ಹಳ್ಳಿಗಳಲ್ಲಿ ಪ್ರಚಾರ ಮಾಡಿದ್ದೇನೆ. ಇದು ನನ್ನ ಆರನೇ ಚುನಾವಣೆ. ಇಷ್ಟೊಂದು ಬೆಂಬಲ ನಾನು ಹಿಂದೆ ನೋಡಿರಲಿಲ್ಲ. ಅಭೂತಪೂರ್ವ ಜನ ಬೆಂಬಲ ಸಿಗುತ್ತಿದೆ. ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಬಾರಿ ದೊಡ್ಡ ಮಟ್ಟದಲ್ಲಿ ನಾನು ಗೆಲುವು ಸಾಧಿಸುತ್ತೇನೆ ಎಂದು ಸಚಿವ ಬಿ.ಸಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES