ಬೆಂಗಳೂರು : ಜನರಿಗೆ ಸಹಾಯ ಮಾಡಲು ಅಧಿಕಾರ ಬೇಕಿಲ್ಲ. ಮನುಷ್ಯತ್ವ ಇದ್ದರೆ ಸಾಕು. ಮನುಷ್ಯತ್ವ ಇರುವವರು ಕಷ್ಟಕ್ಕೆ ಸ್ಪಂದಿಸುತ್ತಾರೆ. ಆ ಕೆಲಸವನ್ನು ನಾನು ಮಾಡಿದ್ದೇನೆ ಎಂದು ಸಚಿವ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ಹೇಳಿದರು.
ಮನೆ ಮನೆ ಪ್ರಚಾರ ನಡೆಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಎಸ್.ಟಿ.ಸೋಮಶೇಖರ್, ಪ್ರತಿಪಕ್ಷದ ಅಭ್ಯರ್ಥಿ 205 ಕೋಟಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಆದರೆ, ಒಬ್ಬರಿಗೆ ಒಂದು ಮಾಸ್ಕ್ ಕೂಡ ಕೊಡಲಿಲ್ಲ ಎಂದು ಕುಟುಕಿದರು.
365 ದಿನವೂ ಕ್ಷೇತ್ರದಲ್ಲಿ ಇರುತ್ತೇನೆ
ಯಶವಂತಪುರ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿ, ಒಳಚರಂಡಿ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವುದರ ಜೊತೆಗೆ ಕೋವಿಡ್ ಸಮಯದಲ್ಲಿ ಜನತೆಯ ನೋವಿಗೆ ಸ್ಪಂದಿಸಿದ್ದೇನೆ. ನಾನು ವರ್ಷದ 365 ದಿನವೂ ಕ್ಷೇತ್ರದಲ್ಲಿ ಇರುತ್ತೇನೆ. ಒಂದಿಲ್ಲೊಂದು ಕಾರ್ಯಕ್ರಮ ಮಾಡುತ್ತಾ ಜನತೆ ಜೊತೆ ಇದ್ದೇನೆ. ಅವರ ನೋವಿಗೆ ನಾನು ಸ್ಪಂದಿಸಿರುವುದರಿಂದ ಕ್ಷೇತ್ರದ ಜನತೆಯ ಸಹಾನುಭೂತಿ ನನ್ನ ಮೇಲಿದೆಯೇ ಹೊರತು ಐದು ವರ್ಷಕ್ಕೆ ಒಮ್ಮೆ ಬರುವ ವ್ಯಕ್ತಿ ಮೇಲಲ್ಲ ಎಂದರು.
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ
ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತ ಪರಿಹಾರ ಕಾಮಗಾರಿ ಕೈಗೊಳ್ಳಲಾಗುತ್ತಿದೆ. 110 ಹಳ್ಳಿ ವ್ಯಾಪ್ತಿಯ ಪ್ರದೇಶಗಳಲ್ಲಿ ಕಾವೇರಿ ಐದನೇ ಹಂತದ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಎಸ್.ಟಿ.ಸೋಮಶೇಖರ್ ಹೇಳಿದರು.
ಇದನ್ನೂ ಓದಿ : ಕ್ಷೇತ್ರದ ಅಭಿವೃದ್ಧಿ, ಜನರ ಕಲ್ಯಾಣಕ್ಕೆ ಹಗಲಿರುಳು ಶ್ರಮ : ಸಚಿವ ಕೆ.ಗೋಪಾಲಯ್ಯ
ಸರ್.ಎಂ.ವಿಶ್ವೇಶ್ವರಯ್ಯ ಆರನೇ ಬ್ಲಾಕ್, ಲಿಂಗಧೀರೆನಹಳ್ಳಿ, ಬನಶಂಕರಿ 6ನೇ ಹಂತದಲ್ಲಿ 58 MLD ಸಾಮರ್ಥ್ಯದ ಜಲಗಾರಗಳನ್ನು ನಿರ್ಮಿಸಿ ನೀರು ಶೇಖರಣಾ ಪ್ರಕ್ರಿಯೆ ಪ್ರಗತಿಯಲ್ಲಿದೆ. ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಶುದ್ಧೀಕರಿಸಿದ 110 MLD ನೀರು ಕ್ಷೇತ್ರದ ಜನತೆಗೆ ಲಭ್ಯವಾಗುವಂತೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
5 ಎಸ್ ಟಿಪಿಗಳ ನಿರ್ಮಾಣ
ಕ್ಷೇತ್ರದಲ್ಲಿ ಒಳಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಾಮಗಾರಿ ಕೈಗೊಳ್ಳಲಾಗಿದೆ. ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣೆಗಾಗಿ ಕೆಂಗೇರಿ, ಹೆಮ್ಮಿಗೆಪುರ, ದೊಡ್ಡಬಿದರಕಲ್ಲು ಸೇರಿದಂತೆ 5 ಎಸ್ ಟಿಪಿ(STP)ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಭೂಮಿ ನೀಡಿದ 14 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಪ್ರಾರಂಭಗೊಂಡಿದೆ ಎಂದು ಮಾಹಿತಿ ನೀಡಿದರು.
ಹೆಮ್ಮಿಗೆಪುರ ವಾರ್ಡ್ ನ ಸುಣಕಲ್ಲು ಪಾಳ್ಯ, ರಘುವನಹಳ್ಳಿ, ವಾಜರಹಳ್ಳಿ, ಮಲ್ಲಸಂದ್ರ ಹೇರೋಹಳ್ಳಿ ವಾರ್ಡ್ ನ ಬ್ಯಾಡರಹಳ್ಳಿ ಸೇರಿದಂತೆ ನಾನಾ ಕಡೆ ಎಸ್.ಟಿ.ಸೋಮಶೇಖರ್ ಪ್ರಚಾರ ನಡೆಸಿ, ಮತಯಾಚಿಸಿದರು.