ಬೆಂಗಳೂರು : ಅನ್ನ, ಅಭಯ, ಅಕ್ಷರ, ಆರೋಗ್ಯ, ಅಭಿವೃದ್ಧಿಯನ್ನು ಒಳಗೊಂಡ ಪಂಚಾಮೃತದಿಂದ ಆದಾಯ ಎಂಬ ‘ಅಮೃತವನ್ನು ನೀಡುವ ಪ್ರಜಾ ಪ್ರಣಾಳಿಕೆ’ಯನ್ನು ಬಿಡುಗಡೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬಿಜೆಪಿ ‘ಪ್ರಜಾ ಪ್ರಣಾಳಿಕೆ’ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಣಾಳಿಕೆ ಬಿಡುಗಡೆ ಬಳಿಕ ಅವರು ಮಾತನಾಡಿದರು.
ಜನರ ಭಾವನೆ ಹಾಗೂ ಧ್ವನಿಯನ್ನು ಗ್ರಹಿಸಿ ಪ್ರಜಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ನವ ಭಾರತಕ್ಕಾಗಿ ನವ ಕರ್ನಾಟಕವನ್ನು ನಿರ್ಮಿಸುವ ನಮ್ಮ ಸಂಕಲ್ಪ ಸಾಕಾರಗೊಳ್ಳುವ ದಿನ ಅತ್ಯಂತ ಸಮೀಪಿಸುತ್ತಿದೆ ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
5 ಟ್ರಿಲಿಯನ್ ಡಾಲರ್ ಎಕಾನಮಿ ಗುರಿ
ಜನರಿಂದ ಜನರಿಗೋಸ್ಕರ ಇರುವ ಪ್ರಜಾ ಪ್ರಣಾಳಿಕೆ ಇದಾಗಿದೆ. ಕರ್ನಾಟಕವನ್ನು ಶಕ್ತಿ ಶಾಲಿ ರಾಜ್ಯವಾಗಿಸುವ ಮಾಡುವ ಗುರಿ ನಮ್ಮದು. ಪ್ರಧಾನ ಮಂತ್ರಿಯ ಐದು ಟ್ರಿಲಿಯನ್ ಡಾಲರ್ ಎಕಾನಮಿಯ ಗುರಿ ಮುಟ್ಟಲು ಐಟಿ ಬಿಟಿ, ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು. ರಾಜ್ಯದ ಜನರು ಜನಪರ ಪ್ರಣಾಳಿಕೆ ಗಮನಿಸಿ ಬಿಜೆಪಿಗೆ ಬೆಂಬಲ ಕೊಡುತ್ತಾರೆ ಎನ್ನುವ ನಂಬಿಕೆಯಿದೆ ಎಂದು ಹೇಳಿದರು.
ಇದನ್ನೂ ಓದಿ : ಬಿಜೆಪಿ ಪ್ರಣಾಳಿಕೆಯಲ್ಲಿ ‘ಪುನೀತ’ : ಅಪ್ಪು ಹೆಸರಲ್ಲಿ ‘ಫಿಲ್ಮ್ ಸಿಟಿ’ ನಿರ್ಮಾಣ
ಒಂದು ಸಾವಿರ ಕೃಷಿ ಉತ್ಪಾದನಾ ಕೇಂದ್ರ
ಕೋವಿಡ್ ಬಗ್ಗೆ ನಾವು ಯಾರೂ ಯೋಚಿಸಿರಲಿಲ್ಲ. ಅದರ ಅನುಭವದ ಆಧಾರದ ಮೇಲೆ ಈ ಪ್ರಣಾಳಿಕೆ ಮಾಡಿದ್ದೇವೆ. ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ರೈತರಿಗೇ ಈಗಾಗಲೇ ಬಜೆಟ್ ನಲ್ಲಿ ಯೋಜನೆಗಳನ್ನು ಘೋಷಣೆ ಮಾಡಿದ್ದೇವೆ. ಒಂದು ಸಾವಿರ ಕೃಷಿ ಉತ್ಪಾದನಾ ಕೇಂದ್ರಗಳನ್ನು ತೆರೆಯುವುದು, ನೀರಾವರಿ ಯೋಜನೆಗಳನ್ನು ಪೂರ್ಣ ಮಾಡುವ ಸಂಕಲ್ಪ, ಸಿರಿ ಧಾನ್ಯಕ್ಕೆ ಅತಿ ಹೆಚ್ಚು ಒತ್ತುಕೊಡುವ ಕೆಲಸ ಮಾಡಲಾಗಿದೆ ಎಂದರು.
ನಗರ ಪ್ರದೇಶದಲ್ಲಿ 5 ಲಕ್ಷ ಮನೆ, ಗ್ರಾಮೀಣ ಪ್ರದೇಶಗಳಲ್ಲಿ 10 ಲಕ್ಷ ಮನೆ ನಿರ್ಮಾಣ ಪ್ರತಿ ಮನೆ ನಿರ್ಮಾಣ 5 ಲಕ್ಷ ರೂ. ನೀಡಲಾಗುವುದು. ಪಡಿತರದಲ್ಲಿ ಅಕ್ಕಿಯ ಜೊತೆಗೆ ಐದು ಕೆಜಿ ಸಿರಿ ಧಾನ್ಯ ನೀಡಲಾಗುವುದು. ಅರ್ಧ ಲೀ ಟರ್ ಹಾಲು ಕೊಡಲಾಗುವುದು. ಬಿಪಿಎಲ್ ಕಾರ್ಡ್ ದಾರರಿಗೆ ಆಯುಷ್ಮಾನ್ ಭಾರತ ಯೋಜನೆ ಅಡಿ 10 ಲಕ್ಷ ರೂ ವಿಮೆ ನೀಡಲಾಗುವುದು. ಶಿಕ್ಷಣಕ್ಕೆ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.