ಬೆಂಗಳೂರು : ಜೆಡಿಎಸ್ ಪಕ್ಷಕ್ಕೆ ನೀವು ನೀಡುವ ಒಂದೊಂದು ಮತವೂ ಕಾಂಗ್ರಾಸ್ ಖಾತೆಗೆ ಹೋಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಕೈ, ದಳದ ವಿರುದ್ಧ ಗುಡುಗಿದರು.
ಗೊಂಬೆಗಳ ನಾಡು ಚನ್ನಪಟ್ಟಣದಲ್ಲಿ ಹಮ್ಮಿಕೊಂಡಿರುವ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ದೃಷ್ಟಿಯಲ್ಲಿ ಕರ್ನಾಟಕ ರಾಜ್ಯ ಎಟಿಎಂ ಎಂದು ವಾಗ್ದಾಳಿ ನಡೆಸಿದರು.
‘ಶ್ರೀರಾಮ ಆಶಿರ್ವದಿಸಿದ ರಾಮನಗರಕ್ಕೆ ನನ್ನ ಪ್ರಣಾಮಗಳು’ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಮಠದ ಬಾಲಗಂಗಾಧರ ಸ್ವಾಮೀಜಿಯವರ ಜನ್ಮ ರಾಮನಗರದ ಇದೇ ಪುಣ್ಯಭೂಮಿಯಲ್ಲಿ ಆಗಿದೆ ಎಂದು ಹೇಳಿದರು.
ಕೈ,ದಳಕ್ಕೆ ಕರ್ನಾಟಕ ಎಟಿಎಂ ಆಗಿದೆ
ಕರ್ನಾಟಕದ ಈ ಬಾರಿ ಚುನಾವಣೆ ಬಹಳ ಮಹತ್ವದಾಗಿದೆ. ಈ ಚುನಾವಣೆ ರಾಜ್ಯವನ್ನು ನಂಬರ್ 1 ಮಾಡುವ ಚುನಾವಣೆಯಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ದೃಷ್ಟಿಯಲ್ಲಿ ಕರ್ನಾಟಕ ಎಟಿಎಂ ಆಗಿದೆ. ಜೆಡಿಎಸ್‌ಗೆ ನೀಡುವ ಒಂದೊಂದು ವೋಟು ಕಾಂಗ್ರೆಸ್‌ಗೆ ಹೋಗುತ್ತದೆ. ಅದಕ್ಕಾಗಿ, ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಪ್ರಧಾನಿ ಮೋದಿ ಎಚ್ಚರಿಸಿದರು.
ಜೆಡಿಎಸ್ ನಾವೇ ಕಿಂಗ್ ಮೇಕರ್ ಅಂತಿದೆ
ಕಾಂಗ್ರೆಸ್ ಮತ್ತು ಜೆಡಿಎಸ್ ಹೊರಗಿಂದ ನೋಡಲು ಮಾತ್ರ ಬೇರೆ ಬೇರೆ ಆದರೆ, ಆಂತರಿಕವಾಗಿ ಒಂದೇ. ಜೆಡಿಎಸ್ ಹೇಳುತ್ತೆ 15 ಸೀಟ್ ಬಂದರೇ ನಾವೇ ಕಿಂಗ್ ಮೇಕರ್ ಅಂತ. ಈ ಸ್ವಾರ್ಥದಿಂದ ಒಂದು ಕುಟುಂಬಕ್ಕಷ್ಟೇ ಲಾಭವಾಗುತ್ತದೆ. ಆದರೆ, ರಾಜ್ಯದ ಅನೇಕ ಕುಟುಂಬಕ್ಕೆ ನಷ್ಟವಾಗುತ್ತದೆ. ರಾಜ್ಯ ಬಹಳ ಕಾಲದಿಂದ ಅಸ್ತಿರ ಸರ್ಕಾರಗಳನ್ನು ನೋಡಿದೆ. ಇದರಿಂದ ಲೂಟಿಯಾಗುತ್ತದೆ. ಹೊರತು ಅಭಿವೃದ್ಧಿಯಾಗುವುದಿಲ್ಲ ಎಂದು ಗುಡುಗಿದರು.
ನಿಜವಾದ ಗ್ಯಾರಂಟಿ ಏನು ಗೊತ್ತೇ?
ಕಾಂಗ್ರೆಸ್ ನಾಯಕರು ಈಗಲೂ ಸುಳ್ಳು ಗ್ಯಾರಂಟಿ ಹಿಡಿದು ಓಡಾಡುತ್ತಿದ್ದಾರೆ. ನಿಜವಾದ ಗ್ಯಾರಂಟಿ ಏನು ಗೊತ್ತೇ? ಕಿಸಾನ್ ಸಮ್ಮಾನ್ ನಿಧಿಯ 6,000 ಜೊತೆ ರಾಜ್ಯದ ಡಬಲ್ ಎಂಜಿನ್‌ನ 4,000 ಸೇರಿ ರೈತರಿಗೆ ಡಬಲ್ ಲಾಭವಾಗಿದೆ. ಇದು ಚುನಾವಣಾ ನಾಟಕವಲ್ಲ, ಬದಲಾಗಿ ರೈತರಿಗೆ ನಿಜವಾಗಿಯೂ ತಲುಪುತ್ತಿರುವ ಗ್ಯಾರಂಟಿ. ರಾಮನಗರದ 3,00,000 ಮಂದಿಗೆ ಆಯುಷ್ಮಾನ್ ಕಾರ್ಡ್ ನೀಡಲಾಗಿದ್ದು ಅವರ ಚಿಕಿತ್ಸಾ ವೆಚ್ಚ ಭರಿಸಲು ಸಹಕಾರಿಯಾಗಿದೆ. ಇದು ನಿಜವಾದ ಗ್ಯಾರಂಟಿ ಎಂದು ಪ್ರಧಾನಿ ಮೋದಿ ಛೇಡಿಸಿದರು.
ಬಿಜೆಪಿ ನೀತಿಗಳಿಂದ ರೇಷ್ಮೆ ರಫ್ತು ಹೆಚ್ಚಳ
ಬಿಜೆಪಿ ಸರ್ಕಾರ ರೇಷ್ಮೆಗೆ ಪ್ರತಿ ಟನ್‌ಗೆ 10,000 ಸಹಾಯಧನ ನೀಡುತ್ತಿದೆ. ಬಿಜೆಪಿ ಸರ್ಕಾರದ ನೀತಿಗಳಿಂದಾಗಿ ರೇಷ್ಮೆ ರಫ್ತು ಕೂಡ ಹೆಚ್ಚಾಗಿದೆ. ರೇಷ್ಮೆ ಬೆಳೆಗಾರರಿಗೆ ಇಂಬಾಗಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ನಮ್ಮ ಬಿಜೆಪಿ ಸರ್ಕಾರ ಎಂದು ಹೇಳಿದರು.
ರಿವರ್ಸ್ ಗೇರ್‌ನಲ್ಲಿ ಸಾಗಲು ಬಿಡಲ್ಲ
ಬಿಜೆಪಿ ಸರ್ಕಾರದ ಪ್ರತಿ ಅಭಿವೃದ್ಧಿ ಕಾರ್ಯವನ್ನೂ ಕಾಂಗ್ರೆಸ್ ರಿವರ್ಸ್ ಮಾಡಲು ಚಡಪಡಿಸುತ್ತಿದೆ. ಜೆಡಿಎಸ್ ಪಕ್ಷವೂ ಕಾಂಗ್ರೆಸ್ ಪಕ್ಷಕ್ಕೆ ಬೇಕಾದಂತೆ ಹೆಜ್ಜೆ ಹಾಕುತ್ತದೆ. ಕರ್ನಾಟಕ ರಿವರ್ಸ್ ಗೇರ್‌ನಲ್ಲಿ ಸಾಗಲು ಸಾಧ್ಯವಿಲ್ಲ. ಬದಲಾಗಿ ಡಬಲ್ ಎಂಜಿನ್ ಸರ್ಕಾರ ಡಬಲ್ ಶಕ್ತಿಯಲ್ಲಿ ಮುನ್ನಡೆಯಲಿದೆ ಎಂದು ಕೈ, ದಳಕ್ಕೆ ಪ್ರಧಾನಿ ಮೋದಿ ಟಕ್ಕರ್ ಕೊಟ್ಟರು.