ಬೆಂಗಳೂರು : ನಾನು ಸುಮಾರು ಗಾಳ ಹಾಕಿ ಹಾಕಿ ಸುಸ್ತಾಗಿದ್ದೆ. ಆದರೀಗ ದೊಡ್ಡ ಬಲೆ ಹಾಕಿ ಗೀತಾ ಶಿವರಾಜ್ ಕುಮಾರ್ ಅವರನ್ನು ಬೀಳಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಡಾ. ರಾಜ್ ಕುಮಾರ್ ಸೊಸೆ ಗೀತಾ ಶಿವರಾಜ್ಕುಮಾರ್ ಅವರು ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಡಿ.ಕೆ ಶಿವಕುಮಾರ್ ಅವರು ಶಾಲು ಹೊದಿಸಿ, ಪಕ್ಷದ ಬಾವುಟ ನೀಡಿ ಗೀತಾ ಶಿವರಾಜ್ಕುಮಾರ್ ಬರಮಾಡಿಕೊಂಡರು.
ಬಳಿಕ ಮಾತನಾಡಿರುವ ಡಿ.ಕೆ ಶಿವಕುಮಾರ್ ಅವರು, ನಾನು ಸುಮಾರು ಗಾಳ ಹಾಕಿದ್ದು, ನಮ್ಮ ಗಾಳಕ್ಕೆ ಮಧು ಬಂಗಾರಪ್ಪ ಬಿದ್ದರು. ಇದೀಗ ಗೀತಾ ಶಿವರಾಜ್ ಕುಮಾರ್ ದೊಡ್ಡ ಬಲೆ ಬಿದ್ದಿದ್ದಾರೆ. ರಾಹುಲ್ ಗಾಂಧಿಯವರ ಕಾರ್ಯಕ್ರಮದ ಬಲೆಗೆ ಗೀತಾ ಶಿವರಾಜ್ ಕುಮಾರ್ ಬಿದ್ದಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ಡಿಕೆಶಿ ನೋಡಿದ್ರೆ ಯಾರು ವೋಟ್ ಹಾಕುತ್ತಾರೆ : ಅಶ್ವತ್ಥನಾರಾಯಣ ಲೇವಡಿ
ಒಳ್ಳೆ ಮುಹೂರ್ತ ನೋಡಿದ್ದೇನೆ
ಗೀತಾ ಶಿವರಾಜ್ ಕುಮಾರ್ ಅವರಿಗೆ ಒಳ್ಳೆ ಘಳಿಗೆ ಒಳ್ಳೆ ಮುಹೂರ್ತ ನೋಡಿದ್ದೇನೆ. ಈಗ ಬಂದು ಸೇರಿದ್ದಾರೆ. ನಮ್ಮ ನಾಯಕ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಪುತ್ರಿ. ವರನಟ ಡಾ.ರಾಜ್ ಕುಮಾರ್ ಸೊಸೆ. ಕಾಂಗ್ರೆಸ್ ಪಕ್ಷದ ಪರವಾಗಿ ಗೀತಾ ಶಿವರಾಜ್ ಕುಮಾರ್ಗೆ ಸ್ವಾಗತ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರ ಸಮ್ಮುಖದಲ್ಲಿ ಜೆಡಿಎಸ್ ಮುಖಂಡರಾದ ಗೀತಾ ಶಿವರಾಜ್ ಕುಮಾರ್, ಮಾಜಿ ಸಚಿವರಾದ ಬಿ.ಬಿ ನಿಂಗಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ @SaleemAhmadINC, ಕೆಪಿಸಿಸಿ ಉಪಾಧ್ಯಕ್ಷರಾದ ಬಿ.ಎಲ್ ಶಂಕರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. pic.twitter.com/PGtFrNH1p7
— Karnataka Congress (@INCKarnataka) April 28, 2023
ಶಿವಣ್ಣನೂ ಪ್ರಚಾರ ಮಾಡ್ತಾರೆ
ಗೀತಾ ಶಿವರಾಜ್ ಕುಮಾರ್ ಮಾತನಾಡಿ, ನಮ್ಮ ತಂದೆ ಬಂಗಾರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ ಪಕ್ಷ ಕಾಂಗ್ರೆಸ್. ನಾಳೆಯಿಂದಲೇ ಕ್ಯಾಂಪೇನ್ ಗೆ ಹೋಗ್ತಾ ಇದ್ದೀವಿ. ಕೆಲವು ಕಡೆ ಶಿವರಾಜ್ ಕುಮಾರ್ ಕೂಡ ಪ್ರಚಾರ ಮಾಡ್ತಾರೆ. ನನ್ನ ತಮ್ಮ ಎಲ್ಲಿರ್ತಾನೋ ನಾನೂ ಅಲ್ಲೇ ಇರ್ತೀನಿ ಎಂದು ಹೇಳಿದರು.
ನಿಮಗೆ ಇನ್ನೊಬ್ಬ ತಮ್ಮ ಇದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ, ಯಾರು ಎಂದು ಗೀತಾ ಶಿವರಾಜ್ ಕುಮಾರ್ ಕೇಳಿದ ಪ್ರಸಂಗ ನಡೆಯಿತು. ಬಲಿಕ, ಕುಮಾರ್ ಬಂಗಾರಪ್ಪ ಬಗ್ಗೆ ನಾನು ಮಾತಾಡಲ್ಲ ಎಂದು ಗೀತಾ ಶಿವರಾಜ್ ಕುಮಾರ್ ಜಾಣ್ಮೆಯ ನಡೆ ಪ್ರದರ್ಶಿಸಿದರು.