ಬೆಂಗಳೂರು : ಉಳ್ಳಾಲ ವಿಧಾನಸಭಾ ಕ್ಷೇತ್ರ ಇದೀಗ ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ಜೆಡಿಎಸ್ನಿಂದ ಕಣಕ್ಕಿಳಿದಿದ್ದ ಅಲ್ತಾಫ್ ಕುಂಪಲ ಅವರು ಪಕ್ಷದ ಮುಖಂಡರಿಗೇ ಮಾಹಿತಿ ನೀಡದೆ ನಾಮಪತ್ರ ಹಿಂಪಡೆದಿದ್ದಾರೆ.
ಹೀಗಾಗಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಇಲ್ಲದಂತಾಗಿದೆ. ಜೆಡಿಎಸ್ಗೆ ತೀವ್ರ ಹಿನ್ನಡೆಯಾಗಿದ್ದು, ಜೆಡಿಎಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಮಪತ್ರ ವಾಪಸ್ ಪಡೆದಿರುವುದಕ್ಕೆ ಅಲ್ತಾಫ್ ಕುಂಪಲ ಕಾರಣ ನೀಡಿದ್ದಾರೆ.
ನಾನು ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೆ. ಏಪ್ರಿಲ್ 20ರಂದು ನಾನು ಮಸೀದಿಯಲ್ಲಿ ಪ್ರಾರ್ಥನೆ ಮಾಡಿ ವಾಪಸ್ ಬರ್ತಾ ಇದ್ದೆ. ಈ ವೇಳೆ ಕಾಂಗ್ರೆಸ್ನ ಉಸ್ಮಾನ್ ಕಲ್ಲಾಪು ಸೇರಿ ಹಲವರು ನನ್ನನ್ನ ಕರೆದುಕೊಂಡು ಹೋದರು ಎಂದು ಹೇಳಿದ್ದಾರೆ.
ನಾನು ಆಮಿಷಗಳಿಲ್ಲ ಒಳಗಾಗಿಲ್ಲ
ಬೆದರಿಕೆ ಹಾಗೂ ಧಮ್ಕಿ ಹಾಕಿ ನಾಮಪತ್ರ ವಾಪಸ್ ತೆಗೆಯಲು ಸಹಿ ಹಾಕಿಸಿದ್ದಾರೆ. ನಾನು ಯಾವುದೇ ಆಮಿಷಗಳಿಗೆ ಒಳಗಾಗಿಲ್ಲ, ಒತ್ತಡದಿಂದ ವಾಪಾಸ್ ತೆಗೆದಿದ್ದೇನೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಕ್ರಮಕ್ಕೆ ನಾನು ದೂರು ನೀಡಿದ್ದೇನೆ ಎಂದು ಅಲ್ತಾಫ್ ಕುಂಪಲ ತಿಳಿಸಿದ್ದಾರೆ.
ಇದನ್ನೂ ಓದಿ : ‘ನನ್ನನ್ನು ಬಲಿಪಶು ಮಾಡಿದ್ರು’ ಅಂತಾ ಹೇಳಲ್ಲ : ಸತ್ಯ ಬಿಚ್ಚಿಟ್ಟ ಎಚ್ಡಿಡಿ
ಅಲ್ತಾಫ್ ಕುಂಪಲ ನಾಮಪತ್ರ ವಾಪಸ್ ಪಡೆದಿರುವ ಬಗ್ಗೆ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಜೆಡಿಎಸ್ ರಾಜ್ಯ ವಕ್ತಾರ ಎಂ.ಬಿ.ಸದಾಶಿವ ಪ್ರತಿಕ್ರಿಯೆ ನೀಡಿದ್ದು, ನಾವು ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ್ದೇವೆ. ಉಳ್ಳಾಲ ಕ್ಷೇತ್ರದಲ್ಲಿ ಅಲ್ತಾಫ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದೆವು. ಜನಸಾಮಾನ್ಯರಿಗೆ ಬೇಕಾದ ಸಾಮಾಜಿಕ ಕಳಕಳಿಯ ವ್ಯಕ್ತಿ ಅವರು ಎಂದು ಹೇಳಿದ್ದಾರೆ.