ರಾಜ್ ಕುಮಾರ್ (Rajkumar) ಅಂದ್ರೆ ಬರೀ ಹೆಸರಲ್ಲ, ಅದೊಂದು ಶಕ್ತಿ, ಅದು ಕನ್ನಡದ ಪ್ರತಿಧ್ವನಿ, ಕನ್ನಡಕ್ಕಾಗಿ ಬಾಳಿ ಬದುಕಿದ ಮೇರುನಟ, 5 ದಶಕಗಳ ಕಾಲ ಕನ್ನಡಿಗರ ಮನೆ ಮಾತಾಗಿದ ವರನಟ ಡಾ.ರಾಜಕುಮಾರ್ ಅವರ 93ನೇ ಜನ್ಮದಿನ ಇಂದು
ಹೌದು, ಕರುನಾಡಿಗೆ ಇಂದು ಒಂದು ರೀತಿ ವಿಶೇಷ ದಿನ. ಯಾಕೆಂದರೆ ಅಪ್ಪಾಜಿಯ ಹುಟ್ಟುಹಬ್ಬ ಇವರು ಮೈಸೂರು ಸಂಸ್ಥಾನದ ಗಜನೂರಿನಲ್ಲಿ 1929ರಲ್ಲಿ ಜನಿಸಿದ್ದರು. ಇವರ ಸಿನಿರಮಗಕ್ಕೆ ನೀಡಿದ ಗಣನೀಯ ಸೇವೆಯನ್ನು ಪರಿಗಣಿಸಿ ಮೈಸೂರು ವಿವಿಯು ಗೌರವ ಡಾಕ್ಟರೇಟ್ ನೀಡಿದೆ. ಡಾ. ರಾಜ್ 1954-2005ರವರೆಗೆ ಸಿನಿರಂಗದಲ್ಲಿ ಮನೆ ಮಾತಾಗಿದ್ದರು. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ ಹೆಗ್ಗಳಿಕೆ ಇವರದ್ದು, ದಾದಾ ಸಾಹೇಬ್ ಫಾಲ್ಕೆ ಹಾಗೂ ಕರ್ನಾಟಕ ರತ್ನ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಅಣ್ಣಾವ್ರ ಹುಟ್ಟುಹಬ್ಬ ಹೆಚ್ಚು ಅದ್ಧೂರಿಯಿಂದ ಆಚರಿಸುವುದು ಅನುಮಾನವಾಗಿದೆ.ಅದಕ್ಕೆ ಕಾರಣ ಏನು ಎಂದು ಎಲ್ಲರಿಗೂ ಗೊತ್ತಿದೆ. ಕರ್ನಾಟಕ ‘ರಾಜರತ್ನ’ ಪುನೀತ್ ರಾಜ್ಕುಮಾರ್ ಅವರ ಅಗಲಿದ ನಂತರ, ಮೊದಲ ಬಾರಿಗೆ ಅಣ್ಣಾವ್ರ ಹುಟ್ಟುಹಬ್ಬ ಬಂದಿದೆ. ಪ್ರತಿ ವರ್ಷ ಅಣ್ಣಾವ್ರ ಹುಟ್ಟುಹಬ್ಬದಂದು ಪುನೀತ್ ರಾಜ್ಕುಮಾರ್ ಅಪ್ಪಾಜಿ ಸಮಾಧಿಗೆ ತೆರಳಿ ಪೂಜೆ ಮಾಡುತ್ತಿದ್ದರು. ಆದರೆ, ಈ ಬಾರಿ ಅಪ್ಪು, ಅಪ್ಪಾಜಿ ಪಕ್ಕದಲ್ಲೇ ಶಾಶ್ವತವಾಗಿ ಮಲಗಿದ್ದಾರೆ. ಇದೆಲ್ಲದರ ನಡುವೆ ರಾಜ್ಯದಲ್ಲಿಂದು ಅಪ್ಪಾಜಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆ.