Friday, November 22, 2024

ಮಲ್ಲೇಶ್ವರದ ಜನತೆ ‘ಎಂದೆಂದೂ ಬಿಜೆಪಿ’ಯನ್ನೇ ಬೆಂಬಲಿಸುತ್ತಾರೆ : ಅಶ್ವತ್ಥನಾರಾಯಣ

ಬೆಂಗಳೂರು : ಮಲ್ಲೇಶ್ವರದ ಜನತೆ ಎಂದೆಂದೂ ಬಿಜೆಪಿಯನ್ನೇ ಬೆಂಬಲಿಸುತ್ತಾರೆ ಎಂದು ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಪವರ್ ಟಿವಿ ಜೊತೆ ಮಾತನಾಡಿರುವ ಅವರು, ಕಳೆದ ಬಾರಿಗಿಂತ ಈ ಬಾರಿ ಇನ್ನೂ ಹಚ್ಚಿನ ಅಂತರದಿಂದ ಗೆಲ್ಲುತ್ತೇನೆ ಎಂದು ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಲ್ಲೇಶ್ವರದಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ಇದೆ‌. ಈ ಕ್ಷೇತ್ರದಲ್ಲಿ ಬ್ರಾಹ್ಮಣರ ಸಂಖ್ಯೆ ಹೆಚ್ಚಿದೆ ಎಂದು ಕಾಂಗ್ರೆಸ್ ನವರು ಬ್ರಾಹ್ಮಣ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದ್ದಾರೆ. ಆದರೆ, ಮಲ್ಲೇಶ್ವರದ ಜನ ಜಾತಿ ಮೀರಿದವರು. ಎಂದೆಂದೂ ಬಿಜೆಪಿಯನ್ನೇ ಬೆಂಬಲಿಸುತ್ತಾರೆ ಎಂದು ಕಾಂಗ್ರೆಸ್ ರಣತಂತ್ರದ ವಿರುದ್ಧ ಗುಡುಗಿದ್ದಾರೆ.

ಸಿದ್ದು ಹೇಳಿಕೆಯಿಂದ ನೋವಾಗಿದೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡಲಸಂಗಮ ಬಸವಕಲ್ಯಾಣಕ್ಕೆ ಹೋಗಿ ಬಂದ ಮಾತ್ರಕ್ಕೆ ಏನೂ ವ್ಯತ್ಯಾಸವಾಗುವುದಿಲ್ಲ. ನಿಜವಾದ ಬಸವತತ್ವ ಪಾಲನೆ ಮಾಡುತ್ತಿರುವುದು ಬಿಜೆಪಿಯವರು. ಹಾಗಾಗಿ ಲಿಂಗಾಯಿತ ಸಮುದಾಯ ಬಿಜೆಪಿಯನ್ನು ಬಿಟ್ಟು ಹೋಗುವುದಿಲ್ಲ. ಸಿದ್ದರಾಮಯ್ಯ ಅವರ ಹೇಳಿಕೆಯಿಂದ ಲಿಂಗಾಯಿತ ಸಮುದಾಯಕ್ಕೆ ನೋವಾಗಿದೆ ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ.

ಜಗದೀಶ್ ಶೆಟ್ಟರ್​, ಸವದಿಗೆ ಟಕ್ಕರ್

ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿಗೆ ಪಕ್ಷ ಎಲ್ಲ ಕೊಟ್ಟಿತ್ತು. ಆದರೆ, ಟಿಕೆಟ್ ಸಿಗದ ಕಾರಣಕ್ಕೆ ಪಕ್ಷ ಬಿಟ್ಟು ಹೋದರು. ಅಲ್ಲೂ ಕೂಡ ನಾವು ಟಿಕೆಟ್ ಕೊಟ್ಟಿರೋದು ಮತ್ತೊಬ್ಬ ಲಿಂಗಾಯಿತ ಅಭ್ಯರ್ಥಿಗೆ ತಾನೆ. ಹೊಸಬರಿಗೆ  ಸ್ಥಾನ ಬಿಟ್ಟುಕೊಡುವ ವಿಶಾಲ ಹೃದಯ ಅವರಿಗೆ ಇರಬೇಕಾಗಿತ್ತು. ಈಗ ಅಲ್ಲಿಯೂ ಗೆಲ್ಲೋದು ಬಿಜೆಪಿಯೇ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಅಶೋಕ್ ಜಯರಾಮ್ ಹೆಚ್ಚು ಮತಗಳಿಂದ ದಿಗ್ವಿಜಯ ಸಾಧಿಸಲಿದ್ದಾರೆ : ಸಚಿವ ಅಶ್ವತ್ಥನಾರಾಯಣ

ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 29ರಂದು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಸಮಗ್ರ ಬೆಂಗಳೂರು ಉತ್ತರದ ಎಲ್ಲ ಅಭ್ಯರ್ಥಿಗಳ ಪರವಾಗಿ ರೋಡ್ ಶೋ (ರ್ಯಾಲಿ) ನಡೆಸಲಿದ್ದಾರೆ. ಮೋದಿ ಅವರ ಆಗಮನ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಲಿದೆ ಎಂದು ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟಿದ್ದಾರೆ.

ಮಲ್ಲೇಶ್ವರದ ಅಭಿವೃದ್ಧಿಗೆ ಆದ್ಯತೆ

ಮಲ್ಲೇಶ್ವರದ ಗೌರಿ ಆಪಾರ್ಟ್‌ಮೆಂಟ್‌ ನಿವಾಸಿಗಳು, ಆರ್‌.ಕೆ ಕಾಲೋನಿ ನಾಗರಿಕರು ಹಾಗೂ ಸದಾಶಿವನಗರ ನಿವಾಸಿಗಳ ಜೊತೆ ಸಚಿವ ಅಶ್ವತ್ಥನಾರಾಯಣ ಅವರು ಸಭೆ ನಡೆಸಿದ್ದಾರೆ. ಈ ಬಾರಿ ಬಿಜೆಪಿಗೆ ಮತ ನೀಡುವ ಮೂಲಕ ಬಹುಮತದಿಂದ ನನ್ನನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದ್ದಾರೆ.

ಮಲ್ಲೇಶ್ವರದ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿ ಸರ್ಕಾರದಡಿ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಬಿಜೆಪಿಯೇ ಭರವಸೆ ಎಂಬ ಧ್ವನಿ ಎಲ್ಲೆಡೆ ಕೇಳಿಬರುತ್ತಿದೆ. ಜನತೆಯ ಆಶೀರ್ವಾದದೊಂದಿಗೆ ಪೂರ್ಣ ಬಹುಮತ ಪಡೆದು ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES