ಯಾದಗಿರಿ: ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಕೋಟಿ ಕೋಟಿ ಒಡೆಯರ ನಡುವೆ ಯಾದಗಿರಿ ಪಕ್ಷೇತರ ಅಭ್ಯರ್ಥಿಯೊಬ್ಬರು ಗಮನ ಸೆಳೆದಿದ್ದಾರೆ. ಭಿಕ್ಷೆ ಬೇಡಿ 10 ಸಾವಿರ ಸಂಗ್ರಹಿಸಿ ಡೆಪಾಸಿಟ್ ಮಾಡಿ ನಾಮಪತ್ರ ಸಲ್ಲಿಸಿದ್ದಾರೆ.
ಹೌದು, ಯಾದಗಿರಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಯಂಕಪ್ಪ ಎಂಬುವವರು ನಾಮಪತ್ರ ಸಲ್ಲಿಸಿದ್ದಾರೆ. ಇವರು ತಾವು ಭಿಕ್ಷೆ ಬೇಡಿ ಸಂಗ್ರಹಿಸಿದ್ದ ಹಣವನ್ನು ಡೆಪಾಸಿಟಿ ಮಾಡಿದ್ದಾರೆ.
ಕಳೆದ ಒಂದು ವರ್ಷದಿಂದ ಕ್ಷೇತ್ರದಾದ್ಯಂತ ಸಂಚರಿಸಿ ಭಿಕ್ಷೆ ಬೇಡಿ ಪ್ರತಿಯೊಂದು ಮನೆಯಿಂದ ಒಂದೊಂದು ರೂ. ಸಂಗ್ರಹಿಸಿ 10 ಸಾವಿರ ರೂ ವರೆಗೆ ನಾಣ್ಯಗಳನ್ನು ಜಮೇ ಮಾಡಿ ಯಾದಗಿರಿ ತಹಶೀಲ್ದಾರ್ ಕಚೇರಿಯಲ್ಲಿ ಯಂಕಪ್ಪನವರು ನಾಮಪತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ : ನಾಳೆ ಸಮೃದ್ಧಿ ಮಂಜುನಾಥ್ ನಾಮಪತ್ರ ಸಲ್ಲಿಕೆ : ದೇವೇಗೌಡರ ಆಶೀರ್ವಾದ
ಇನ್ನು ಈ ಬಗ್ಗೆ ಮಾತನಾಡಿದ ಯಂಕಪ್ಪ, ನಾನು ದೇಶಕ್ಕಾಗಿ, ಸಮಾಜದ ಉದ್ಧಾರಕ್ಕಾಗಿ ಕ್ಷೇತ್ರದಾದ್ಯಂತ ಸಂಚಾರ ಮಾಡಿದ್ದೇನೆ. ನನ್ನ ಜೀವನವಿಡೀ ಮನೆಯ ಮೆಟ್ಟಿಲು ತುಳಿಯದೇ ಸಮಾಜದ ಸೇವೆ ಮಾಡುತ್ತೇನೆ. ನನ್ನ ವೈಯುಕ್ತಿಕ ಜೀವನವನ್ನು ತ್ಯಜಿಸಿ ರಾಜಕೀಯ ಪ್ರವೇಶಿಸುತ್ತಿದ್ದೇನೆ ಎಂದರು.
ಮತ್ತೊಂದೆಡೆ ಯಂಕಪ್ಪ ತಂದಿದ್ದ ನಾಣ್ಯಗಳನ್ನ ಎಣಿಕೆ ಮಾಡಿ ಅಧಿಕಾರಿಗಳು ಸುಸ್ತಾದ್ರು.
ರಾಣಿಬೆನ್ನೂರಿನಲ್ಲೂ ನಾಣ್ಯ ಠೇವಣಿ ಮಾಡಿ ನಾಮಪತ್ರ ಸಲ್ಲಿಕೆ
ಯಾದಗಿರಿ ಮಾತ್ರವಲ್ಲದೆ ಹಾವೇರಿಯಲ್ಲಿಯೂ ಎಎಪಿ ಅಭ್ಯರ್ಥಿಯೊಬ್ಬರು ನಾಣ್ಯಗಳ ಮೂಲಕವೇ ಠೇವಣಿ ತುಂಬಿ ನಾಮಪತ್ರ ಸಲ್ಲಿಸಿದ್ದಾರೆ. ರಾಣೇಬೆನ್ನೂರಿನಲ್ಲಿ ಹನುಮಂತಪ್ಪ ಕಬ್ಬಾರ್ ಎಂಬುವವರು ಮೋಟೆಯಲ್ಲಿ ನಾಣ್ಯಗಳನ್ನು ತಂದು ಡೆಪಾಸಿಟ್ ಮಾಡಿದ್ದಾರೆ.
ಮೊದಲು ನಾಣ್ಯವನ್ನು ಚುನಾವಣಾಧಿಕಾರಿಯೇ ಎಣಿಸಲು ಮುಂದಾಗಿದ್ದು ಬಳಿಕ ತಮ್ಮ ಸಿಬ್ಬಂದಿ ಸಹಾಯ ಪಡೆದಿದ್ದಾರೆ. ನಾಣ್ಯಗಳನ್ನು ಎಣಿಸಲು ಸಾಕಷ್ಟು ಸಮಯ ಬೇಕಿದ್ದರಿಂದ ನಾಣ್ಯ ಎಣಿಸುವ ಮೊದಲೇ ಅವರಿಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಯಿತು.