ಹಾವೇರಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆಗೆ ಮುನ್ನ ಸ್ವಕ್ಷೇತ್ರದ ಜನರ ಮುಂದೆ ಭಾವುಕವಾಗಿ ಮಾತನಾಡಿದ್ದಾರೆ.
ಶಿಗ್ಗಾವಿಯಲ್ಲಿ ನಾಮಪತ್ರ ಸಲ್ಲಿಕೆಗೆ ಮುನ್ನ ಸಮಾವೇಶವನ್ನುದ್ದೇಶಿಸಿ ಮಾತನಾಡಿರುವ ಅವರು, ನನ್ನ ಸಾವಾದರೆ, ನನ್ನನ್ನು ಶಿಗ್ಗಾವಿಯ ಮಣ್ಣಿನಲ್ಲೇ ಮಣ್ಣು ಮಾಡಬೇಕು ಎಂದು ಹೇಳಿದ್ದಾರೆ.
ನನ್ನನ್ನು ಬೆಳಸಿದವರು ನೀವು. ನನ್ನನ್ನು ಉಳಿಸಿಕೊಳ್ಳುವವರು ನೀವು. ನಾನು ನನ್ನ ಜೀವನದ ಕೊನೆಯ ಉಸಿರು ಇರುವವರೆಗೂ ನಿಮ್ಮ ಸೇವೆಯನ್ನು ಮಾಡುತ್ತೇನೆ. ನನ್ನನ್ನು ಇಲ್ಲೇ ಮಣ್ಣು ಮಾಡಿ. ಇದು ನನ್ನ ಶಿಗ್ಗಾವಿಯ ಭೂಮಿ ತಾಯಿಯ ಮಣ್ಣಿನ ಋಣ ತೀರಿಸುವಂತದ್ದಾಗಲಿ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಇದನ್ನೂ ಓದಿ : ಕೆನ್ನೆ ಹಿಂಡಿದ ಯಡಿಯೂರಪ್ಪ, ಮುಗುಳ್ನಕ್ಕ ನಟಿ ಶೃತಿ
ಉಸಿರಿರುವ ತನಕ ಸೇವೆ ಮಾಡ್ತೀನಿ
ಅದ್ಯಾವ ಜನ್ಮದ ಸಂಬಂಧವೊ ಯಾವ ಋಣಾನುಬಂಧವೊ ನೀವು ಸತತ ಹದಿನೈದು ವರ್ಷ ಬೆಂಬಲ ನೀಡಿದ್ದೀರಿ. ನಮ್ಮ ನಿಮ್ಮ ನಡುವೆ ಯಾವುದೇ ಶಕ್ತಿ ಅಡ್ಡಿ ಬರುವುದಿಲ್ಲ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ತಲೆ ಬಾಗಿ, ನನ್ನ ಕೊನೆ ಉಸಿರು ಇರುವ ತನಕ ನಿಮ್ಮ ಸೇವೆ ಮಾಡುತ್ತೇನೆ ಎಂಬ ಪ್ರತಿಜ್ಞೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ನನ್ನ ತವರು ಶಿಗ್ಗಾಂವಿ-ಸವಣೂರಿನ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸುವ ಮುನ್ನ, ಆಯೋಜಿಸಿದ್ದ ಬೃಹತ್ ರೋಡ್ ಶೋ ನಲ್ಲಿ ಭಾಗಿಯಾದೆನು. ತವರಿನ ಜನರ ಪ್ರೀತಿ, ಅಭಿಮಾನ ಹಾಗೂ ಋಣವನ್ನು ಎಂದೆಂದಿಗೂ ಮರೆಯುವುದಿಲ್ಲ.
#BJPYeBharavase pic.twitter.com/k113iZvCwX
— Basavaraj S Bommai (@BSBommai) April 19, 2023
ಈಗಾಗಲೇ ಗೆದ್ದಾಗಿದೆ, ಇದು ವಿಜಯೋತ್ಸವ
ಈ ವೇಳೆ ನೆರೆದಿದ್ದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಜನ ಸಾಗರವನ್ನು ಕಂಡ ಸಿಎಂ ಬೊಮ್ಮಾಯಿ, ಇದು ವಿಜಯೋತ್ಸವ. ಇಲ್ಲಿ ಸಂಭ್ರಮ ಕಾಣಿಸುತ್ತಿದೆ. ಈಗಾಗಲೇ ಗೆದ್ದಾಗಿದೆ ಇದು ವಿಜಯೋತ್ಸವ ಎಂದು ಹೇಳಿದ್ದಾರೆ.