ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಗೂ ಮೊದಲಿನಿಂದಲೇ ಮಂಡ್ಯ ರಾಜಕೀಯ ರಂಗೇರಿತ್ತು. ಜೆಡಿಎಸ್ ಭದ್ರಕೋಟೆಯನ್ನು ಧೂಳಿಪಟ ಮಾಡಲು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ರಣತಂತ್ರ ರೂಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಜೆಡಿಎಸ್ ಸಹ ತನ್ನದೇ ಆದ ಸ್ಟಾಂಡ್ ಕೈಗೊಂಡಿದೆ.
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಯಾರು ಸ್ಪರ್ಧೆ ಮಾಡುತ್ತಾರೆ ಎಂಬ ಬಗ್ಗೆ ಸ್ವತಃ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಅವರು, ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ. ಮಂಡ್ಯದಲ್ಲಿ ಸಾಮಾನ್ಯ ರೈತ ಮನೆಯ ಮಗಳನ್ನು ನಿಲ್ಲಿಸಿ ಗೆಲ್ಲಿಸುತ್ತೇನೆ ಎಂದು ಎಚ್.ಡಿ.ಕುಮಾರಸ್ವಾಮಿ ದೊಡ್ಡ ಘೋಷಣೆ ಮಾಡಿದ್ದಾರೆ.
ಇದನ್ನು ಓದಿ : ಇಂದು ಕಾಂಗ್ರೆಸ್ 4ನೇ ಪಟ್ಟಿ ಬಿಡುಗಡೆ ಸಾಧ್ಯತೆ
ಚನ್ನಪಟ್ಟಣದಿಂದಲೇ ಸ್ಪರ್ಧೆ
ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂದಿದ್ಯಾರು? ಚನ್ನಪಟ್ಟಣ ಕ್ಷೇತ್ರದಿಂದ ನಾನು ನಾಮಪತ್ರ (ಉಮೇದುವಾರಿಕೆ) ಸಲ್ಲಿಸಿದ್ದೇನೆ. ಜನರಲ್ಲಿ ಗೊಂದಲ ಮೂಡಿಸುವ ಕೆಲಸಕ್ಕೆ ಮುಂದಾಗುವುದಿಲ್ಲ ಎಂದು ಹೇಳಿದ್ದಾರೆ.
ಮಂಡ್ಯದಲ್ಲಿ ಕುಮಾರಸ್ವಾಮಿ ಸ್ಪರ್ಧಿಸಿದರೆ ಸಂಸದೆ ಸುಮಲತಾ ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು, ನಾನು ಸುಮಲತಾರಷ್ಟು ದೊಡ್ಡ ವ್ಯಕ್ತಿಯಲ್ಲ. ಮಂಡ್ಯದಲ್ಲಿ ಸಾಮಾನ್ಯ ರೈತ ಮನೆಯ ಮಗಳನ್ನು ನಿಲ್ಲಿಸಿ ಗೆಲ್ಲಿಸುತ್ತೇನೆ ಎಂದು ಸವಾಲೆಸೆದಿದ್ದಾರೆ.