ಬೆಂಗಳೂರು : ಬಿಜೆಪಿಯವರು ಐ.ಟಿ, ಇ.ಡಿ ದಾಳಿ ಮಾಡಿಸಿ ನಮ್ಮ ಅಭ್ಯರ್ಥಿಗಳನ್ನು ಹೆದರಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಐಟಿ, ಇಡಿ ಇದ್ಯಾವುದಕ್ಕೂ ನಾವು ಹೆದರಲ್ಲ. ಈ ಚುನಾವಣೆಯಲ್ಲಿ 140 ಸ್ಥಾನ ಗೆಲ್ಲುತ್ತೇವೆ ಅಂದುಕೊಂಡಿದ್ದೆವು. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಸೇರ್ಪಡೆಯಿಂದ 150 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯದವರು ನಮ್ಮ ಜತೆ ಬರುತ್ತಾರೆ. ನಮಗೆ ಜನ, ಕಾರ್ಯಕ್ರಮಗಳ ಮೇಲೆ ನಂಬಿಕೆಯಿದೆ. ಬಿಜೆಪಿಯಲ್ಲಿ ಯಾರು ಹರಿಶ್ಚಂದ್ರರು ಇಲ್ಲ. ಬಿಜೆಪಿಯವರನ್ನು ಅವರು ಮುಟ್ಟುತ್ತಿಲ್ಲ. ನಮಗೆ ಯಾವುದೇ ರೀತಿ ತೊಂದರೆ ಇಲ್ಲ. ಜನರ ಬೆಂಬಲದಿಂದ ಚುನಾವಣೆ ಮಾಡುತ್ತೇವೆ ಎಂದು ಡಿಕೆಶಿ ಹೇಳಿದ್ದಾರೆ.
ಇದನ್ನೂ ಓದಿ : ಬಿಜೆಪಿ ಟಿಕೆಟ್ ಕೈ ತಪ್ಪಲು ಬಿಎಲ್ ಸಂತೋಷ್ ಕಾರಣ : ಜಗದೀಶ್ ಶೆಟ್ಟರ್
ಸಿದ್ದು, ಪರಂ ಜೊತೆ ಖರ್ಗೆ ಚರ್ಚೆ
ಬೆಂಗಳೂರಿನ ಸದಾಶಿವನಗರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಮಹತ್ವದ ಸಭೆ ನಡೆದಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮಾಜಿ ಡಿಸಿಎಂ ಡಾ.ಪರಮೇಶ್ವರ್ ಜೊತೆಗೆ ಚರ್ಚೆ ನಡೆಸಿದ್ದಾರೆ. ಪ್ರಣಾಳಿಕೆ ಬಿಡುಗಡೆ, ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.