ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಲಿಂಗಾಯತ ಸಮುದಾಯದ ನಾಯಕರಿಗೆ ಅಪಮಾನವಾಗುತ್ತಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬೇಸರ ಹೊರಹಾಕಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಜಗದೀಶ್ ಶೆಟ್ಟರ್ ಅವರು, ಲಿಂಗಾಯತ ನಾಯಕರಲ್ಲಿ ಬಿ.ಎಸ್ ಯಡಿಯೂರಪ್ಪ ಬಿಟ್ಟರೆ ನಾನೇ ಹಿರಿಯ ನಾಯಕ. ಹೀಗಾಗಿ, ನನ್ನನ್ನು ಹೊರ ಹಾಕಿದರು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕೆಲವರ ಹಿಡಿತದಲ್ಲಿದೆ
ರಾಜ್ಯ ಬಿಜೆಪಿ ಕೆಲವೇ ಕೆಲವು ವ್ಯಕ್ತಿಗಳ ಕಂಟ್ರೋಲ್ನಲ್ಲಿ ಇದೆ. ರಾಜ್ಯ ಬಿಜೆಪಿ ಕೆಲವು ವ್ಯಕ್ತಿಗಳ ಹಿಡಿತದಲ್ಲಿದೆ. ಕೆಲ ಬಿಜೆಪಿ ನಾಯಕರು ತಮ್ಮ ಹಿತಾಸಕ್ತಿಗಾಗಿ ಕೆಲಸ ಮಾಡ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಆರೋಪ ಮಾಡಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ನಲ್ಲಿ ಲಿಂಗಾಯತ ನಾಯಕರಿಗೆ ಭವಿಷ್ಯವಿಲ್ಲ : ಸಚಿವ ಬಿ.ಸಿ.ಪಾಟೀಲ್
ಮೋದಿಯನ್ನು ಟೀಕೆ ಮಾಡಲ್ಲ
ನಾನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಟೀಕೆ ಮಾಡುತ್ತಿಲ್ಲ. ಲಿಂಗಾಯತ ನಾಯಕರಲ್ಲಿ ಬಿಎಸ್ವೈ ಬಿಟ್ಟರೆ ನಾನೇ ಹಿರಿಯ. ಅದಕ್ಕಾಗಿ ನನ್ನನ್ನು ಪಕ್ಷದಿಂದ ಹೊರಹಾಕಿರಬೇಕು ಎಂದು ಈ ರೀತಿ ಮಾಡಿದರು ಎಂದು ಪುನರುಚ್ಚಸಿದ್ದಾರೆ.
ಕಾಂಗ್ರೆಸ್ ಸೇರ್ಪಡೆಯ ಕುರಿತು pic.twitter.com/vPETlZ87N3
— Jagadish Shettar (@JagadishShettar) April 17, 2023
ಹಲವು ತಿಂಗಳಿಂದ ವೇದನೆ ಆಗಿದೆ
ಹಲವಾರು ತಿಂಗಳ ಹಿಂದೆ ಹಿರಿಯ ನಾಯಕನಾಗಿ ನನಗೆ ಏನು ವೇದನೆ ಆಗಿದೆ ಅದು ಯಾರ ಗಮನಕ್ಕೂ ಬರಲಿಲ್ಲ. ಕಾಂಗ್ರೆಸ್ ತತ್ವ, ಸಿದ್ಧಾಂತ ಒಪ್ಪಿ ಪಕ್ಷ ಸೇರ್ಪಡೆಯಾಗಿದ್ದೇನೆ. ರಾಜ್ಯ ಬಿಜೆಪಿ ಬೆಳವಣಿಗೆ ವರಿಷ್ಠರ ಗಮನಕ್ಕೆ ಬಂದಿಲ್ಲ ಅನಿಸುತ್ತದೆ. ನಾನು ಮಂತ್ರಿ, ಮುಖ್ಯಮಂತ್ರಿ ಆಗಿದ್ದೇನೆ, ನನಗೆ ಅಧಿಕಾರ ಬೇಕಿಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಇನ್ನೂ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತನಾಡಿರುವ ಡಿ.ಕೆ ಶಿವಕುಮಾರ್, ವೈಯಕ್ತಿಕವಾಗಿ ಹಾಗೂ ಲಿಂಗಾಯತ ಸಮುದಾಯಕ್ಕೆ ಆದ ಅಪಮಾನಕ್ಕೆ ಬೇಸತ್ತು ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.