ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಸೇರಿದಂತೆ ಎಲ್ಲರಿಗೂ ಅಪಮಾನ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡ ಬಳಿಕ ಮಾತನಾಡಿದ ಅವರು, ಲಿಂಗಾಯತ ಸಮುದಾಯದ ಆತ್ಮಗೌರಕ್ಕೆ ಧಕ್ಕೆಯಾಗಿದ್ದು, ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಲಿಂಗಾಯತ ಸಮುದಾಯ ಹೇಗೆ ಕಾಂಗ್ರೆಸ್ ಪರವಾಗಿ ನಿಂತಿತ್ತೋ ಅದೇ ರೀತಿ ಈ ಬಾರಿಯು ಲಿಂಗಾಯತ ಸಮುದಾಯ ಕಾಂಗ್ರೆಸ್ ಪರವಾಗಿ ನಿಲ್ಲಲಿದೆ ಎಂದು ತಿಳಿಸಿದ್ದಾರೆ.
ಸ್ವಾಭಿಮಾನ ರಕ್ಷಣೆಗಾಗಿ ‘ಕೈ‘ ಸೇರ್ಪಡೆ
ಲಿಂಗಾಯತ ಸಮುದಾಯಕ್ಕೆ ಆಗುತ್ತಿರುವ ಅಪಮಾನ ಹಾಗೂ ತಮ್ಮನ್ನು ಬಿಜೆಪಿ ನಡೆಸಿಕೊಂಡ ರೀತಿಗೆ ಬೇಸತ್ತು ತಮ್ಮ ಸ್ವಾಭಿಮಾನ ರಕ್ಷಣೆಗಾಗಿ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ಲಿಂಗಾಯತರನ್ನು ಸಿಎಂ ಮಾಡಿದ್ದು ಬಿಜೆಪಿ : ಅರವಿಂದ ಬೆಲ್ಲದ
ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಇದೊಂದು ಮಹತ್ವದ ದಿನ. ಕಾಂಗ್ರೆಸ್ ತತ್ವ, ಸಿದ್ಧಾಂತಗಳ ಮೇಲೆ ನಂಬಿಕೆಯಿಟ್ಟು ಮಾಜಿ ಮುಖ್ಯಮಂತ್ರಿಗಳಾದ ಶ್ರೀ @JagadishShettar ಅವರು ಇಂದು ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆಗೊಂಡರು. ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಶುಭ ಹಾರೈಸಿದೆ. pic.twitter.com/j7ldduDnnc
— DK Shivakumar (@DKShivakumar) April 17, 2023
ಶೆಟ್ಟರ್ ಯಾವ ಬೇಡಿಯನ್ನೂ ಇಟ್ಟಿಲ್ಲ
ಜಗದೀಶ್ ಶೆಟ್ಟರ್ ಅವರು ಯಾವುದೇ ಷರತ್ತನ್ನು ಇಟ್ಟಿಲ್ಲ. ಅವರು ಬೇಷರತ್ತಾಗಿ ಕಾಂಗ್ರೆಸ್ ಸೇರುತ್ತಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಹಾಗೂ ನಾಯಕತ್ವ ಒಪ್ಪಿ ಪಕ್ಷ ಸೇರುತ್ತಿದ್ದಾರೆ. ಕೇವಲ ಕಾಂಗ್ರೆಸ್ ಪಕ್ಷ ಮಾತ್ರ ದೇಶವನ್ನು ಒಗ್ಗೂಡಿಸಲು ಸಾಧ್ಯ ಎಂದು ಡಿ.ಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಪಕ್ಷಕ್ಕೆ ಇನ್ನು ಎಷ್ಟು ಜನ ನಾಯಕರು ಸೇರುತ್ತಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಕಾಂಗ್ರೆಸ್ ಪಕ್ಷ ಸೇರಲು ಅನೇಕ ನಾಯಕರು ಸೇರಲು ಮುಂದಾಗಿದ್ದಾರೆ. ಆದರೆ, ನಾವು ಎಲ್ಲರಿಗೂ ಸೂಕ್ತ ಸ್ಥಾನಮಾನ ನೀಡಲು ಸಾಧ್ಯವಿಲ್ಲ. ಹೀಗಾಗಿ ಎಲ್ಲರನ್ನು ಸೇರಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿಲ್ಲ ಎಂದು ಮಾಹಿತಿ ನೀಡಿದ್ದಾರೆ.