ಬೆಂಗಳೂರು : ಕೋಲಾರದಲ್ಲಿ ನಡೆದ ಕಾಂಗ್ರೆಸ್ ‘ಜೈ ಭಾರತ’ ಬೃಹತ್ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಷಣದುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನನ್ನನ್ನು ಜೈಲಿಗೆ ಹಾಕಿ, ಅನರ್ಹ ಮಾಡಿ ನಾನು ಹೆದರಲ್ಲ. ಅದಾನಿ, ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರಕ್ಕೆ ಚಿಹ್ನೆ ಆಗಿದ್ದಾರೆ. ನನ್ನನ್ನು ಅನರ್ಹಗೊಳಿಸಿ ಬೆದರಿಸುವ ಕೆಲಸ ಮಾಡಿದರು. ಅದಾನಿ ವಿಷಯವನ್ನು ಮಾತನಾಡಬಾರದು ಅಂತ ಬಯಸುತ್ತಾರೆ. ಅದಕ್ಕಾಗಿ ನನ್ನನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದರು ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಬಿಜೆಪಿ ಸರ್ಕಾರ ಅದಾನಿಗೆ ಸಾವಿರಾರು ಕೋಟಿ ಕೊಡುಗೆ ನೀಡಿದೆ. ಮೋದಿ ಅವರಿಗೆ ನಾನು ಒಂದು ಪತ್ರ ಬರೆದಿದ್ದೆ. ಆದರೆ, ಇದುವರೆಗೂ ನಾನು ಬರೆದ ಪತ್ರಕ್ಕೆ ಉತ್ತರ ನೀಡಿಲ್ಲ. ಸಂಸತ್‌ನಲ್ಲಿ ಅದಾನಿ ಜೊತೆಗೆ ಮೋದಿ ಇರುವ ಫೋಟೋ ತೋರಿಸಿದ್ದೆ. ನಿಮಗೂ ಅದಾನಿಗೂ ಏನ್ ಸಂಬಂಧ ಎಂದು ಪ್ರಶ್ನಿಸಿದ್ದೆ ಎಂದು ರಾಹುಲ್ ಗಾಂಧಿ ಗುಡುಗಿದ್ದಾರೆ.
ಇದನ್ನೂ ಓದಿ : ಕರುನಾಡಲ್ಲಿ ಮೋದಿ ಮೆಗಾ ರ್ಯಾಲಿಗೆ ಪ್ಲ್ಯಾನ್ : ನಿಮ್ಮ ಊರಿಗೆ ಬರಲಿದ್ದಾರೆ ನಮೋ?
ನನಗೆ ಪ್ರಶ್ನಿಸುವ ಹಕ್ಕಿದೆ
ಬೇನಾಮಿ ಕಂಪನಿಗಳಲ್ಲಿರುವ 20 ಸಾವಿರ ಕೋಟಿ ಯಾರದ್ದು? ಈ ಪ್ರಶ್ನೆ ಕೇಳಿದ್ದಕ್ಕೆ ಸದನ ನಡೆಸಲು ಬಿಡಲಿಲ್ಲ. ಈ ಬಗ್ಗೆ ನಾನು ಸ್ಪೀಕರ್ ಅವರಿಗೆ 2 ಪತ್ರ ಬರೆದೆ. ನನಗೆ ಪ್ರಶ್ನಿಸುವ ಹಕ್ಕಿದೆ. ಉತ್ತರ ಕೊಡಿ ಎಂದು ಕೇಳಿದ್ದೇನೆ. ಆಡಳಿತ ಪಕ್ಷದಲ್ಲಿರುವ ಬಿಜೆಪಿ ಸದನ ನಡೆಸಲು ಬಿಡಲಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಬಡವರ ಹಣ ಲೂಟಿ ಮಾಡಿದೆ. ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಏನು ಕೆಲಸ ಮಾಡಿದೆ ಹೇಳಿ? ಏನೇ ಕೆಲಸ ಮಾಡಿದ್ದರೂ ಅದರಲ್ಲಿ 40% ಕಮಿಷನ್. 40% ಕಮಿಷನ್ ನಾನು ಮಾಡ್ತಿರೋ ಆರೋಪವಲ್ಲ. ಗುತ್ತಿಗೆದಾರರ ಸಂಘದವರೇ ಆರೋಪ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.