ಕೋಲಾರ : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ಅಧಿಕಾರಕ್ಕೆ ಬಂದರೆ ಯಾರಿಗೆ ಮುಖ್ಯಮಂತ್ರಿ ಪಟ್ಟ ಎಂಬ ಚರ್ಚೆ ಭಾರೀ ಸದ್ದು ಮಾಡಿತ್ತು. ಅಲ್ಲದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರೂ ಪ್ರಸ್ತಾಪವಾಗಿತ್ತು. ಇದೀಗ ಮಲ್ಲಿಕಾರ್ಜುನ ಖರ್ಗೆ ಅವರೇ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಚಿನ್ನದನಾಡು ಕೋಲಾರದಲ್ಲಿ ಹಮ್ಮಿಕೊಂಡಿದ್ದ ‘ಜೈ ಭಾರತ’ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿ ಆಗಲಿ, ಆ ಪಟ್ಟ ನನಗೆ ಬೇಡ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಅಷ್ಟೆ ಎಂದು ಹೇಳಿದ್ದಾರೆ. ಖರ್ಗೆ ಈ ಹೇಳಿಕೆಯಿಂದ ಸಿಎಂ ರೇಸ್ ನಲ್ಲಿದ್ದ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಫುಲ್ ಖಷ್ ಆಗಿದ್ದಾರೆ.
ರಾಜ್ಯ ನಾಯಕರಿಗೆ ಖರ್ಗೆ ಎಚ್ಚರಿಕೆ
ಮುಖ್ಯಮಂತ್ರಿ ಯಾರಾಗಬೇಕೆಂದು ಕಾಂಗ್ರೆಸ್ ನಾಯಕರು ತಲೆ ಕೆಡಿಸಿಕೊಳ್ಳಬೇಡಿ. ರಾಜ್ಯದ ಜನರ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳಿ. ಪಕ್ಷಕ್ಕೆ ಬಹುಮತ ಬಂದಾಗ ಸಿಎಂ ಬಗ್ಗೆ ಶಾಸಕರು ನಿರ್ಧರಿಸುತ್ತಾರೆ ಎಂದು ಮಲ್ಲಿಕಾರ್ಜುನ ಖರ್ಗೆ ರಾಜ್ಯ ನಾಯಕರಿಗೆ ಖಡಕ್ ಎಚ್ಚಿರಿಕೆ ನೀಡಿದ್ದಾರೆ.
ಇದನ್ನೂ ಓದಿ : ಮಲ್ಲಿಕಾರ್ಜುನ ಖರ್ಗೆ CM : ‘ಡಿಕೆಶಿ ಹೊಸ ಬಾಂಬ್’ಗೆ ಸಿದ್ದು ಕಕ್ಕಾಬಿಕ್ಕಿ
40% ಸರ್ಕಾರಕ್ಕೆ ಜನರು ಬೇಸತ್ತಿದ್ದಾರೆ
ಡಬಲ್ ಇಂಜಿನ್ ಸರ್ಕಾರ ಅಂತಾರೆ, ಹೊಸ ಯೋಜನೆ ತಂದಿಲ್ಲ. ಹಳೇ ಡಬ್ಬಿಗೆ ಹೊಸ ಇಂಜಿನ್ ಕಲರ್ ಹಚ್ಚುತ್ತಿದ್ದಾರೆ. ಈ ಬಿಜೆಪಿ ಸರ್ಕಾರ ತೆಗೆಯದಿದ್ದರೆ ಯಾವುದೇ ಅಭಿವೃದ್ಧಿ ಆಗಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. 40 ಪರ್ಸೆಂಟ್ ಸರ್ಕಾರಕ್ಕೆ ರಾಜ್ಯದ ಜನರು ಬೇಸತ್ತು ಹೋಗಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ ಅವರು 4 ಸಾವಿರ ಕಿ.ಮೀ. ಭಾರತ್ ಜೋಡೋ ಯಾತ್ರೆ ಯಶಸ್ವಿಗೊಳಿದ್ದಾರೆ. ಕೋಲಾರ, ತುಮಕೂರು, ರಾಯಚೂರಿನಲ್ಲಿ ಬಂಗಾರ ಸಿಗುವುದು. ಬರಗಾಲಕ್ಕೆ ತುತ್ತಾದ ಈ ಜಿಲ್ಲೆಯಲ್ಲಿ ನೀರಾವರಿಗೆ ಆದ್ಯತೆ ನೀಡುತ್ತಿರಲಿಲ್ಲ. ಆದರೆ, ನಮ್ಮ ಸರ್ಕಾರ ಬಂದ ಮೇಲೆ ಕೆರೆಗಳಿಗೆ ನೀರು ತುಂಬಿಸಿದ್ದೇವೆ. ಬಂಗಾರದಂತಹ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಶುರು ಮಾಡಿದ್ದೇವೆ ಎಂದು ಹೇಳಿದ್ದಾರೆ.