ಬೆಂಗಳೂರು : ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಕಮಲ ನಾಯಕರ ವಿರುದ್ಧ ಫೈರ್ ಬ್ರಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ತೊರೆದು ಕಾಂಗ್ರೆಸ್ ಕಚೇರಿ ಕಸ ಹೊಡೆಯಲು ಹೊರಟಿದ್ದಾರೆ. ‘ಭಾರತ ಮಾತಾಕಿ ಜೈ ಎನ್ನುತ್ತಿದ್ದವರು ಈಗ ಸೋನಿಯಾಗಾಂಧಿ ಕಿ ಜೈ, ಅರೆಹುಚ್ಚ ರಾಹುಲ್ ಗಾಂಧಿ ಕಿ ಜೈ’ ಎನ್ನುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿ ಲಿಂಗಾಯತರನ್ನು ಮುಗಿಸುವ ಯತ್ನ ಮಾಡ್ತಿದೆ ಎಂದು ಆರೋಪಿಸುತ್ತಿದ್ದೀರಿ. ನೀವೆಲ್ಲಾ ಹುದ್ದೆಗಳನ್ನು ಅನುಭವಿಸಿದ್ದು ಇದೇ ಲಿಂಗಾಯತ ಆಧಾರದ ಮೇಲೆ ಎಂಬುದು ನೆನಪಿರಲಿ. ಲಿಂಗಾಯತರನ್ನು ಕಡೆಗಣಿಸಿದ್ದಾರೆ ಎಂದು ಮಾತಾಡ್ತಿರಲ್ಲಾ? ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಏನು ಹೇಳಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ : ನನ್ನನ್ನು ಜೈಲಿಗೆ ಹಾಕಿ, ಅನರ್ಹ ಮಾಡಿ ನಾನು ಹೆದರಲ್ಲ : ರಾಹುಲ್ ಗಾಂಧಿ ಗುಡುಗು
ಮರಳಿ ಬಿಜೆಪಿಗೆ ಶರಣಾಗತಿ ಆಗಿ
ಡಿಕೆಶಿ ಕಾಂಗ್ರೆಸ್ ಬಂದ ಕೂಡಲೇ ಮೀಸಲಾತಿ ತೆಗೆದು ಹಾಕ್ತೀವಿ ಎಂದಿದ್ದಾರೆ. ಹಾಗಾದ್ರೆ, ಲಿಂಗಾಯತರಿಗೆ, ಪರಿಶಿಷ್ಠ ಜಾತಿ, ಪಂಗಡಗಳಿಗೆ ಮೀಸಲಾತಿ ಸಿಕ್ಕಿದ್ದು ಸಮಾಧಾನ ಇಲ್ಲವೇ? ದುಡುಕಿನ ನಿರ್ಧಾರ ತೆಗೆದುಕೊಂಡಿದ್ದೀರಿ, ಕಾಲ ಮಿಂಚಿಲ್ಲ. ಈಗಲೂ ವಾಪಸ್ ಬಂದು ಬಿಜೆಪಿಗೆ ಶರಣಾಗತಿ ಆಗಿ ಎಂದು ಕಾಂಗ್ರೆಸ್ ಗೆ ಹೊರಟ ನಾಯಕರುಗಳಿಗೆ ಯತ್ನಾಳ ಕಿವಿಮಾತು ಹೇಳಿದ್ದಾರೆ.
ಅಲ್ಲಿ ನಿಮ್ಮ ಡೆಪಾಸಿಟ್ ಉಳಿಯಲ್ಲ
ಅನ್ಯಾಯ ಆಗಿದೆ ಎಂದು ಕೆಲವೊಮ್ಮೆ ನಮಗೆ ಅಸನಿಸುತ್ತೆ. ನನಗೂ ಸಚಿವನನ್ನಾಗಿ ಮಾಡಲಿಲ್ಲ, ನನಗೂ ಅನ್ಯಾಯ ಆಗಿದೆ ಎಂದು ಅನಿಸುತ್ತೆ. ಮೇ 13ರಂದು ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಈಗ ಹೋದವರದ್ದು ಯಾರದ್ದು ಡೆಪಾಸಿಟ್ ಉಳಿಯೋದಿಲ್ಲಾ. ಎಲ್ಲಾ ವೇಸ್ಟ್ ಬಾಡಿಗಳನ್ನು ತೆಗೆದು, ಕಸ ಕಡ್ಡಿಗಳನ್ನು ತೆಗೆಯಲು ಪ್ರಧಾನಿ ಪ್ರಯತ್ನ ಮಾಡಿದ್ದಾರೆ. ಮುಂದಿನ ಐದು ವರ್ಷ ಯೋಗಿ ಆದಿತ್ಯನಾಥ ಮಾದರಿಯಲ್ಲಿ ಕರ್ನಾಟಕದಲ್ಲಿ ಸರ್ಕಾರ ಆಗಲಿದೆ ಎಂದು ಹೇಳಿದ್ದಾರೆ.
ಲಿಂಗಾಯತರ ಕಡೆಗಣನೆ ಆಗಿದೆ ಎಂದು ನೀವು ನಿಮ್ಮ ಸ್ವಾರ್ಥಕ್ಕಾಗಿ ಹೇಳ್ತಿದ್ದೀರಿ. ನಮ್ಮ ದೇಶ, ನಮ್ಮ ಸಿದ್ಧಾಂತ, ನಮ್ಮ ಪ್ರಮಾಣಿಕತೆ ಇದೆಲ್ಲ ನಿಮಗೆ ಇಲ್ಲಾ? ಪಕ್ಷಕ್ಕೆ ಅನ್ಯಾಯ ಮಾಡ್ತಿದ್ದೀರಿ, ದೇವರು ನಿಮಗೆ ಒಳ್ಳೆದು ಮಾಡಲ್ಲಾ ಎಂದು ಯತ್ನಾಳ್ ತಿಳಿಸಿದ್ದಾರೆ.