ಮಡಿಕೇರಿ : ಬಿಜೆಪಿ ಭದ್ರಕೋಟೆ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಸಹಸ್ರಾರು ಬೆಂಬಲಿಗರ ಜೊತೆಗೆ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ನಾಮಪತ್ರ ಸಲ್ಲಿಕೆಯ ಬಳಿಕ ಪವರ್ ಟಿವಿಯೊಂದಿಗೆ ಮಾತನಾಡಿರುವ ನಾಪಂಡ ಮುತ್ತಪ್ಪ ಅವರು, ಪಕ್ಷದಿಂದ ‘ಬಿ’ ಫಾರಂ ಇನ್ನಷ್ಟೆ ದೊರಕಬೇಕಿದ್ದು, ಸೋಮವಾರ ಚುನಾವಣಾಧಿಕಾರಿಗಳಿಗೆ ‘ಬಿ’ ಫಾರಂ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ತನ್ನನ್ನು ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ನಮ್ಮ ಶಕ್ತಿ ಏನು ಅಂತಾ ತೋರಿಸುತ್ತೇವೆ
ಬಿಜೆಪಿ ಇಲ್ಲಿ ಸತತ ಗೆಲ್ಲುತ್ತಾ ಬಂದಿದ್ದರೂ ಕೂಡ ಜಿಲ್ಲೆ ಅಭಿವೃದ್ಧಿಯಾಗಿಲ್ಲ. ಕಾಂಗ್ರೆಸ್ ಇಲ್ಲಿ ಅಭ್ಯರ್ಥಿ ಇಲ್ಲದೆ ಹೊರಗಿನವರನ್ನು ತಂದು ನಿಲ್ಲಿಸಿದೆ. ನಮ್ಮದು ಪ್ರಾದೇಶಿಕ ಪಕ್ಷ ಈ ಬಾರಿ ನಮ್ಮ ಶಕ್ತಿ ಏನು ಅಂತಾ ಮಡಿಕೇರಿ ಕ್ಷೇತ್ರದಲ್ಲೇ ತೋರಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ : ಜೆಡಿಎಸ್ ಸೇರ್ಪಡೆಯಾದ ಎನ್.ಆರ್. ಸಂತೋಷ್
ಜಿಲ್ಲೆಯಲ್ಲಿ ಜೆಡಿಎಸ್ ಪ್ರಬಲವಾಗಿದೆ
ಕ್ಷೇತ್ರದಲ್ಲಿ ಯಾವುದೇ ಪಕ್ಷ ಪ್ರಬಲ, ದುರ್ಬಲ ಎಂಬುದಿಲ್ಲ. ಇದೆಲ್ಲ ನಿರ್ಧಾರವಾಗುವುದು ಮತ ಎಣಿಕೆಯ ಸಂದರ್ಭ ಮಾತ್ರ. ಜಿಲ್ಲೆಯಲ್ಲಿ ಜೆಡಿಎಸ್ ಪ್ರಬಲವಾಗಿದ್ದು, ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲುವುದು ನಿಶ್ಚಿತ ಎಂದು ನಾಪಂಡ ಮುತ್ತಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗೆಲುವಿಗೆ ಯೋಜನೆ ರೂಪಿಸಲಾಗಿದೆ
ತಾನೊಬ್ಬ ಕಾರ್ಮಿಕ ಸಂಘಟನೆಗಳ ಕಾರ್ಯನಿರ್ವಹಿಸಿಕೊಂಡು ಬಂದವನು. ಮುಖಂಡನಾಗಿ ತಳಮಟ್ಟದಿಂದ ದಶಕಗಳಿಂದ ಸಂಘಟನೆ ಹೇಗೆ ಮಾಡಬೇಕೆಂಬುದನ್ನು ಅರಿತಿದ್ದೇನೆ. ಜೆಡಿಎಸ್‌ನಲ್ಲಿ ಪಕ್ಷಕ್ಕಾಗಿ ದುಡಿಯುವ ಪ್ರಾಮಾಣಿಕ ಕಾರ್ಯಕರ್ತರಿದ್ದು, ಜೆಡಿಎಸ್ ಗೆಲುವಿಗೆ ಉತ್ತಮ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ನಾಪಂಡ ಮುತ್ತಪ್ಪ ಅವರು ನಗರದ ಎ.ವಿ ಶಾಲೆಯ ಬಳಿಯಿಂದ ಗಾಂಧಿ ಮೈದಾನದವರೆಗೆ ಪಕ್ಷದ ನೂರಾರು ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆ ನಡೆಸಿದರು. ಪಕ್ಷದ ಪ್ರಮುಖರೊಂದಿಗೆ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಮುತ್ತಪ್ಪ ಅವರು, ಮಡಿಕೇರಿ ಕ್ಷೇತ್ರದ ಚುನಾವಣಾಧಿಕಾರಿ ಡಾ.ಯತೀಶ್ ಉಲ್ಲಾಳ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಯುವ ಮುಖಂಡ ಸಿ.ಎಲ್.ವಿಶ್ವ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.