ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯೊಂದಿಗೆ ಕರ್ನಾಟಕದಲ್ಲಿ ಕದನ ರಣರಂಗ ರೋಚಕ ಘಟ್ಟದತ್ತ ಸಾಗಿದೆ. ಇದು ಮತ್ತಷ್ಟು ರಂಗೇರಲು ರಾಷ್ಟ್ರೀಯ ನಾಯಕರ ಆಗಮನವೊಂದೇ ಬಾಕಿ.
ಹೌದು, ಕರುನಾಡಲ್ಲಿ ಪ್ರಧಾನಿ ನರೇಂದ್ರ ಮೋದಿ ಮೆಗಾ ರ್ಯಾಲಿಗೆ ಕೌಂಟ್ ಡೌನ್ ಶುರುವಾಗಿದೆ. ರಾಜ್ಯದಲ್ಲಿ ಏಪ್ರಿಲ್ 25 ರಿಂದ ಪ್ರಧಾನಿ ಮೋದಿ 2ನೇ ಹಂತದ ಪ್ರಚಾರ ಶುರು ಮಾಡಲಿದ್ದಾರೆ.
ರಾಜ್ಯದ ನಾಲ್ಕೂ ಭಾಗಗಳಲ್ಲಿ ಪ್ರಧಾನಿ ಮೋದಿ ಮೆಗಾ ರ್ಯಾಲಿಗೆ ಪ್ಲ್ಯಾನ್ ಮಾಡಿದ್ದಾರೆ. ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ, ವಿಜಯಪುರ ಕಲಬುರಗಿ, ವಿಜಯಪುರ, ಬೆಳಗಾವಿ ಸೇರಿದಂತೆ, ಮೋದಿ 20ಕ್ಕೂ ಹೆಚ್ಚು ರ್ಯಾಲಿ, ರೋಡ್ ಶೋ ನಡೆಸುವ ಸಾಧ್ಯತೆ ಇದೆ.
ಇದನ್ನೂ ಓದಿ : ‘ಸತ್ಯವೇ ನನ್ನ ಅಸ್ತ್ರ, ಸತ್ಯವೇ ನನಗೆ ಆಸರೆ’ : ರಾಹುಲ್ ಗಾಂಧಿ
ಒಂದೇ ದಿನ 2 ರಿಂದ 3 ಪ್ರಚಾರ ಸಭೆ
ಮತದಾರರನ್ನು ಸೆಳೆಯಲು ಮೋದಿ ಮಹಾ ಕಸರತ್ತು ನಡೆಸುತ್ತಿದ್ದು, ಒಂದೇ ದಿನ 2 ರಿಂದ 3 ಪ್ರಚಾರ ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಪ್ರತಿ ರ್ಯಾಲಿಯಲ್ಲೂ 10ಕ್ಕೂ ಹೆಚ್ಚು ಅಭ್ಯರ್ಥಿಗಳ ಸಮ್ಮುಖದಲ್ಲಿ ಮತ ಯಾಚನೆ ನಡೆಸಲಿದ್ದಾರೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ರಾಜ್ಯಕ್ಕೆ ಪ್ರಧಾನಿ ಮೋದಿ ಎಂಟ್ರಿ ಕೊಡಲಿದ್ದಾರೆ.
ಮೋದಿ ಜೊತೆ ಯಾರಲ್ಲಾ ಬರ್ತಾರೆ?
ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರವಾಸಗಳ ಕುರಿತು ಚರ್ಚೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಷ್ಟ್ರೀಯ ನಾಯಕರುಗಳ ಚುನಾವಣಾ ಪ್ರವಾಸಗಳ ಕುರಿತು ಸಭೆ ನಡೆಸಿದ್ದೇವೆ. ಮುಂದಿನ 20 ದಿನಗಳ ರೂಪುರೇಷೆ ಬಗ್ಗೆ ಚರ್ಚೆ ಮಾಡಿದ್ದೇವೆ. ಎಲ್ಲಾ ಅಭ್ಯರ್ಥಿಗಳ ಜೊತೆ ಸಂಪರ್ಕ ಇಟ್ಟುಕೊಂಡಿದ್ದೇವೆ. ಅಭ್ಯರ್ಥಿಗಳ 3ನೇ ಪಟ್ಟಿ ಶೀಘ್ರ ಬಿಡುಗಡೆ ಆಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.