ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಟಿಕೆಟ್ ಕೈ ತಪ್ಪಿದ ಅಭ್ಯರ್ಥಿಗಳು, ಹಾಲಿ ಶಾಸಕರು, ಸಚಿವರು ಅಸಮಾಧಾನಗೊಂಡು ತಮ್ಮ ಪಕ್ಷ ತೊರೆದು ಬೇರೆ ಬೇರೆ ಪಕ್ಷ ಸೇರುತ್ತಿದ್ದಾರೆ. ಇನ್ನೂ ಕೆಲವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸುತ್ತಿದ್ದಾರೆ.
ಹೌದು, ಅದರಂತೆಯೇ ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ಸುಳ್ಯ ಬಿಜೆಪಿ ಶಾಸಕ ಎಸ್.ಅಂಗಾರ ರಾಜಕೀಯ ನಿವೃತ್ತಿ ಘೋಷಿಸಿ, ವರಿಷ್ಠರು ಹಾಗೂ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದರು.
ಬಿಜೆಪಿ ಅಭ್ಯರ್ಥಿ ಪರ ಪ್ರಚಾರ
ಎರಡು ದಿನದ ಹಿಂದೆ ರಾಜಕೀಯ ನಿವೃತ್ತಿ ಘೋಷಿಸಿದ್ದ ಸುಳ್ಯ ಬಿಜೆಪಿ ಶಾಸಕ ಎಸ್.ಅಂಗಾರ ಇದೀಗ ಉಲ್ಟಾ ಹೊಡೆದಿದ್ದಾರೆ. ಅಲ್ಲದೆ, ತಮ್ಮ ಹೇಳಿಕೆ ಹಿಂಪಡೆದಿದ್ದು, ಮತ್ತೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿದ್ದಾರೆ. ಆ ಮೂಲಕ ಸುಳ್ಯದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ : ಬಿಜೆಪಿ, ಜೆಡಿಎಸ್ ಎಲ್ಲರಿಗೂ ನಾನೇ ಟಾರ್ಗೆಟ್ : ಸಿದ್ದರಾಮಯ್ಯ
ಬಿಜೆಪಿ ಕಾರ್ಯಕರ್ತರ ಆಕ್ರೋಶದ ಬೆನ್ನಲ್ಲೇ ಎಸ್.ಅಂಗಾರ ನಿರ್ಧಾರ ಬದಲಿಸಿದ್ದಾರೆ. ಹಿರಿಯ ನಾಯಕರ ಮಾತುಕತೆ ಬಳಿಕ ಅಂಗಾರ ನಿರ್ಧಾರ ಬದಲಿಸಿದ್ದು, ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಹೇಳಿಕೆಯನ್ನು ನೋವಿನಿಂದ ಹೇಳಿದ್ದೇನೆ ಎಂದು ಹೇಳಿದ್ದಾರೆ.
ಕೆಲಸ ಮಾಡೋದು ನನ್ನ ಹೊಣೆ
ನಾನು ಮೊದಲಿನಂತೆ ಸಕ್ರಿಯವಾಗಿದ್ದು, ಭಾಗೀರಥಿ ಮುರುಳ್ಯ ಅವರ ಗೆಲುವೊಂದೇ ನಮ್ಮ ಮುಂದಿನ ನಡೆ. ವೈಯಕ್ತಿಕವಾಗಿ ನೀಡಿದ ಆ ಹೇಳಿಕೆ ಹಿಂದಕ್ಕೆ ಪಡೆಯುತ್ತಿದ್ದೇನೆ. ಆಯ್ಕೆ ಮಾಡಿದ ಅಭ್ಯರ್ಥಿ ಬಗ್ಗೆ ಬೇಸರ ಇಲ್ಲ, ಅವರ ಪರ ಕೆಲಸ ಮಾಡೋದು ನನ್ನ ಹೊಣೆಗಾರಿಕೆ. ನನ್ನ ಕಾರ್ಯಕರ್ತರು ಜೊತೆ ನಿಂತಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ.