ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಕೆಲ ಹಿರಿಯರಿಗೆ ಹಾಗೂ ಸಿಎಂ ರೇಸ್ ನಲ್ಲಿದ್ದ ಕೆಲವರಿಗೂ ಕೊಕ್ ನೀಡಲಾಗಿದೆ. ಈ ಕುರಿತು ಶಿಕಾರಿಪುರ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ವಿಜಯೇಂದ್ರ ಅನ್ನೋದು ನೆಪ ಮಾತ್ರ. ಯಾರು ಸಿಎಂ ಆಗ್ತಾರೆ ಅನ್ನೋದು ಮುಖ್ಯ ಅಲ್ಲ. ಬಿಜೆಪಿ ಅಧಿಕಾರಕ್ಕೆ ಬರೋದು ಮುಖ್ಯ ಎಂದು ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರು ರಣೋತ್ಸಾಹದಲ್ಲಿ ಇದ್ದಾರೆ. ಸಂಘಟನೆಯ ಶಕ್ತಿಯ ಆಧಾರದ ಮೇಲೆ ನಾವು ಮತ್ತೆ ಅಧಿಕಾರಕ್ಕೆ ಬರ್ತೀವಿ. ಶಿರಾ ಹಾಗೂ ಕೆ.ಆರ್ ಪೇಟೆಯಲ್ಲಿ ಗೆದ್ದದ್ದು ವಿಜಯೇಂದ್ರನಿಂದ ಅಲ್ಲ. ಕಾರ್ಯಕರ್ತರ ಸಂಘಟನೆಯಿಂದ ನಾವು ಅಲ್ಲಿ ಆಗ ಗೆದ್ದೆವು ಎಂದು ವಿಜಯೇಂದ್ರ ತಿಳಿಸಿದ್ದಾರೆ.
ಬಿಎಸ್ ವೈ ಮಗ ಅಂತ ಟಿಕೆಟ್ ಕೊಟ್ಟಿಲ್ಲ
ಇನ್ನೂ ಶಿಕಾರಿಪುರ ಟಿಕೆಟ್ ಬಗ್ಗೆ ಮಾತನಾಡಿರುವ ಅವರು, ಬಿಎಸ್ ವೈ ಮಗ ಅಂತ ಟಿಕೆಟ್ ಕೊಡೋದೇ ಆಗಿದ್ರೆ ಕಳೆದ ಬಾರಿಯೇ ವರುಣದಿಂದ ಟಿಕೆಟ್ ಸಿಕ್ತಾ ಇತ್ತು. ಇಂಥಹ ಪರಿಪಾಠ ಈ ಪಕ್ಷದಲ್ಲಿ ಇಲ್ಲ. ಪಕ್ಷ ಅವಲೋಕನ ಮಾಡಿಯೇ ಟಿಕೆಟ್ ಕೊಡೋದು. ಬಿಎಸ್ ವೈ ಮಗ ಅಂತ ಟಿಕೆಟ್ ಕೊಟ್ಟಿದಾರೆ ಅಂತ ನನಗೆ ಅನ್ನಿಸಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಇದನ್ನೂ ಓದಿ : ಟಿಕೆಟ್ ಕೈತಪ್ಪಿದ್ದಕ್ಕೆ ‘ಬಿಕ್ಕಿಬಿಕ್ಕಿ ಅತ್ತ’ ಶಾಸಕ ರಘುಪತಿ ಭಟ್
ಏ.19ರಂದು ನಾಮಪತ್ರ ಸಲ್ಲಿಕೆ
ಏಪ್ರಿಲ್ 19 ರಂದು ನಾನು ನಾಮಪತ್ರ ಸಲ್ಲಿಕೆ ಮಾಡ್ತೀನಿ. ನಾವು ಮೆಜಾರಿಟಿ ಬಂದೇ ಬರ್ತೀವಿ. ವರಿಷ್ಠರು ಹಾಗೂ ರಾಜ್ಯದ ನಾಯಕರು ನಿರಂತರವಾಗಿ ಪ್ರಚಾರ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ಆಗಿದೆ. ಬಹಳ ವಿಸ್ತೃತ ವಾಗಿ ಕಾರ್ಯಕರ್ತರ ಅಭಿಪ್ರಾಯ ಪಡೆದು, ಸರ್ವೇ ಮಾಡಿ ಟಿಕೆಟ್ ನೀಡಲಾಗಿದೆ. ಮಹಿಳೆಯರಿಗೆ, ಸಮಾಜದ ಎಲ್ಲಾ ವರ್ಗಗಳಿಗೆ ಅವಕಾಶ ಕೊಡಲಾಗಿದೆ. ಕಾರ್ಯಕರ್ತರ ಅಭಿಪ್ರಾಯ ಪಡೆದು ಟಿಕೆಟ್ ಕೊಟ್ಟಿರೋದು ಇದೊಂದೆ ಪಕ್ಷ ಎಂದು ಹೈಕಮಾಂಡ್ ಹಾಡಿ ಹೊಗಳಿದ್ದಾರೆ.
ಸವದಿಗೆ ಪಕ್ಷ ಏನೇನು ಕೊಟ್ಟಿದೆ
ಟಿಕೆಟ್ ಕೈತಪ್ಪಿರುವುದರಿಂದ ಅಸಮಾಧಾನಗೊಂಡ ಕಮಲ ನಾಯಕರ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಬಂಡಾಯ ಅನ್ನೋದು ಸಹಜ. ಪೈಪೋಟಿ ಸಹಜವಾಗಿ ಇದ್ದೇ ಇದೆ. ಇದೆಲ್ಲವನ್ನೂ ಕೂಡ ಸಿಎಂ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ಅಧ್ಯಕ್ಷರು ಕೂತು ಮಾತಾಡಿ ಸರಿ ಪಡಿಸುತ್ತಾರೆ. ಲಕ್ಷ್ಮಣ ಸವದಿ ಅವರಿಗೆ ಪಕ್ಷ ಏನೇನು ಕೊಟ್ಟಿದೆ ಅಂತ ಎಲ್ಲರಿಗೂ ಗೊತ್ತಿದೆ. ಇದನ್ನೆಲ್ಲಾ ಪಕ್ಷದ ಹಿರಿಯರು ಸರಿ ಮಾಡುವ ಕೆಲಸ ಮಾಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಫರ್ಧಿಸುತ್ತಿರುವ ವರುಣಾಗೆ ಪ್ರಚಾರಕ್ಕೆ ಹೋಗುವ ಬಗ್ಗೆ ಮಾತನಾಡಿರುವ ವಿಜಯೇಂದ್ರ, ವರುಣ ಸೇರಿದಂತೆ ಪಕ್ಷ ಎಲ್ಲಿ ಹೇಳುತ್ತೋ ಅಲ್ಲಿ ಪ್ರಚಾರ ಮಾಡ್ತೀನಿ ಎಂದು ಹೇಳಿದ್ದಾರೆ.