Monday, December 23, 2024

ರಾಮಚಂದ್ರಗೌಡರಿಗೆ ಬಿಜೆಪಿ ಟಿಕೆಟ್ : ವರಿಷ್ಠರ ‘ವಿಶ್ವಾಸ ಉಳಿಸಿಕೊಳ್ಳುವೆ’ ಎಂದು ರಾಮಚಂದ್ರಗೌಡ ವಿಶ್ವಾಸ

ಬೆಂಗಳೂರು : ಹೈಕಮಾಂಡ್ ರಾಮಚಂದ್ರಗೌಡ ಅವರಿಗೆ ಶಿಡ್ಲಘಟ್ಟ ಬಿಜೆಪಿ ಟಿಕೆಟ್ ಘೋಷಿಸಿದ್ದು, ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ. ಈ ಬಾರಿ ನಮ್ಮದೇ ಗೆಲುವು ಎಂದು ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬುಧವಾರ ತಡರಾತ್ರಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಅಧಿಕೃತವಾಗಿದ್ದೆ ತಡ ತಾಲೂಕಿನ ಪ್ರತಿ ಹಳ್ಳಿಹಳ್ಳಿಗಳಲ್ಲೂ ರಾಮಚಂದ್ರಗೌಡರ ಬೆಂಬಲಿಗರು ಹಾಗೂ ಅಭಿಮಾನಿಗಳ ಸಂಭ್ರಮ, ಸಡಗರ ಮುಗಿಲು ಮುಟ್ಟಿತ್ತು.

ವರಿಷ್ಠರ ವಿಶ್ವಾಸ ಉಳಿಸಿಕೊಳ್ಳುವೆ

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದ ವರಿಷ್ಠರು ತನ್ನ ಮೇಲೆ ವಿಶ್ವಾಸವಿಟ್ಟು ಟಿಕೆಟ್ ನೀಡಿದ್ದಾರೆ. ಮಾಜಿ ಶಾಸಕ ಎಂ.ರಾಜಣ್ಣ ಅವರ ಸಹಕಾರದೊಂದಿಗೆ ಈ ಬಾರಿ ಶಿಡ್ಲಘಟ್ಟ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಜಯಗಳಿಸಲಿದೆ. ರಾಜ್ಯದಲ್ಲಿಯೂ ಸಂಪೂರ್ಣ ಬಹುಮತದೊಂದಿಗೆ ಪಕ್ಷವು ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ದೊಡ್ಡಬಳ್ಳಾಪುರದಲ್ಲಿ ‘ಧೀರಜ್’ ದರ್ಬಾರ್ : ಅಬ್ಬರದ ಪ್ರಚಾರ

ನಗರದ ವಿವಿಧ ದೇವಾಲಯಗಳಲ್ಲಿ ರಾಮಚಂದ್ರಗೌಡರ ಬೆಂಬಲಿಗರು ರಾಮಚಂದ್ರಗೌಡರ ಗೆಲುವಿಗಾಗಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರ ಗೌಡ, ಮಾಜಿ ಶಾಸಕ ಎಂ.ರಾಜಣ್ಣ, ಮುಖಂಡ ಸೀಕಲ್ ಆನಂದಗೌಡ ಸೇರಿದಂತೆ ಹಲವು ಬಿಜೆಪಿ ಮುಖಂಡರು ಗುರುವಾರ ಕ್ಷೇತ್ರದ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ನಗರಾದ್ಯಂತ ಟೆಂಪಲ್ ರನ್

ಮೊದಲಿಗೆ ವೀರಾಪುರ ಗ್ರಾಮದ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ನಗರದ ಸೊಲ್ಲಾಪುರದಮ್ಮ, ಕೃಷ್ಣಸ್ವಾಮಿ, ಕೋಟೆ ಆಂಜನೇಯ ಸ್ವಾಮಿ, ವೇಣುಗೋಪಾಲಸ್ವಾಮಿ, ಸಾಯಿಬಾಬಾ, ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ, ನಗರೇಶ್ವರ ಸ್ವಾಮಿ, ದ್ವಿಮುಖ ಗಣಪತಿ, ಶಂಕರ ಮಠದ ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶಿಡ್ಲಘಟ್ಟ ನಗರದಲ್ಲಿರುವ ದರ್ಗಾಕ್ಕೆ ತೆರಳಿ ಸೀಕಲ್ ರಾಮಚಂದ್ರಗೌಡ ಅವರು ಪ್ರಾರ್ಥನೆ ಸಲ್ಲಿಸಿದ್ದಾರೆ.

ಪ್ರತೀ ವೃತ್ತಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿ

ಸೇವಾಸೌಧದಲ್ಲಿ 1,000ಕ್ಕೂ ಹೆಚ್ಚು ಅಭಿಮಾನಿಗಳು, ಅನುಯಾಯಿಗಳು, ಕಾರ್ಯಕರ್ತರು, ಬಂಧುಗಳು ಪಟಾಕಿ ಸಿಡಿಸಿ, ಹೂವಿನ ಮಳೆಗರೆದು, ಹಾರ ಹಾಕಿ, ಸಿಹಿ ಹಂಚಿ ಸಂಭ್ರಮಿಸಿದರು. ತಾಲೂಕಿನ ಪ್ರತಿ ವೃತ್ತಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗಿದೆ.

ಈ ವೇಳೆ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರ ಗೌಡ, ನಗರ ಜಿಲ್ಲಾ ಉಪಾಧ್ಯಕ್ಷ ನಂದೀಶ್, ಜಿಲ್ಲಾ ವಕ್ತಾರ ರಮೇಶ್ ಬಾಯರಿ, ಯುವ ಮೋರ್ಚಾ ಅಧ್ಯಕ್ಷ ಭರತ್ ಕುಮಾರ್, ಹಿರಿಯ ಮುಖಂಡ ದಾಮೋದರ್, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ರತ್ನಮ್ಮ, ನೇಕಾರ ಪ್ರಕೋಷ್ಠ ಜಿಲ್ಲಾ ಸಹ ಸಂಚಾಲಕ ನಾಗೇಶ್, ಬಜರಂಗದಳ ತಾಲೂಕು ಸಂಯೋಜಕ ವೆಂಕಟೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES