ಬೆಂಗಳೂರು : ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಮೊದಲ ಪ್ರತಿಕ್ರಿಯೆ ನೀಡಿದ್ದು, ನನ್ನನ್ನು ಗೆಲ್ಲಿಸುವಂತೆ ‘ಕಣಿವೆ ಮಾರಮ್ಮ’ನಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಹೊಸದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿಂದೆ ನನ್ನದೂ ತಪ್ಪಿದೆ. ಇದು ಜನರಲ್ (ಸಾಮಾನ್ಯ ಮೀಸಲು) ಕ್ಷೇತ್ರ, ಪಕ್ಷ ತನ್ನದೇ ಆದ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.
ಈಗ ಜನರಲ್ ಕ್ಷೇತ್ರದಲ್ಲಿ ಸೀಟು ನೀಡಿರುವ ಪಕ್ಷದ ನಿರ್ಧಾರ ಸರಿಯಾಗಿದೆ. ಜನರಲ್ ಕ್ಷೇತ್ರದಲ್ಲಿ ಎಸ್ಸಿಯಾಗಿ ಟಿಕೆಟ್ ಕೇಳಿದ್ದು ನನ್ನ ತಪ್ಪು. ಹಾಗಾಗಿ, ಇಲ್ಲಿ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡ್ತಿದೀನಿ. ನನ್ನನ್ನು ಗೆಲ್ಲಿಸುವಂತೆ ಕಣಿವೆ ಮಾರಮ್ಮ ನಿಗೆ ಮನವಿ ಮಾಡಿದ್ದೇನೆ ಎಂದು ಗೂಳಿಹಟ್ಟಿ ಶೇಖರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಬಿಜೆಪಿ ಪಟ್ಟಿ ‘ಕೈ’ ನಾಯಕರ ಎದೆ ನಡುಗಿಸಿದೆ : ಈಶ್ವರಪ್ಪ
2008ರಲ್ಲಿ ನನ್ನನ್ನು ಗೆಲ್ಲಿಸಿದ್ದರು
ನಾನು ಈ ತಾಯಿಯ ಆಶೀರ್ವಾದದಿಂದಲೇ ರಾಜಕಾರಣ ಪ್ರಾರಂಭಿಸಿದ್ದು. ನನ್ನನ್ನು 2008ರಲ್ಲಿ ಬಹುಮತದಿಂದ ಮತದಾರರು ಗೆಲ್ಲಿಸಿದ್ದರು. ಈಗಲೂ ನನ್ನನ್ನು ಪಕ್ಷೇತರವಾಗಿ ಗೆಲ್ಲಿಸುವಂತೆ ಮನವಿ ಮಾಡ್ತೀನಿ. ಈ ಬಾರಿ ನಾನು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಕಾರ್ಯಕರ್ತರೊಂದಿಗೆ ಸಭೆ
ಇನ್ನೂ ಟಿಕೆಟ್ ಕೈ ತಪ್ಪಿರುವ ಬೆನ್ನಲ್ಲೇ ಶಾಸಕ ಗೂಳಿಹಟ್ಟಿ ಶೇಖರ್ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ದಾರೆ. ಹೊಸದುರ್ಗದ ಕಣಿವೆ ರಂಗನಾಥ ದೇವಸ್ಥಾನದಲ್ಲಿ ಕಾರ್ಯಕರ್ತರ ಸಭೆ ಆಯೋಜಿಸಿದ್ದು. ವಾಣಿ ವಿಲಾಸ ಸಾಗರದ ಹತ್ತಿರದ ಕಣಿವೆ ರಂಗನಾಥ, ಕಣಿವೆ ಮಾರಮ್ಮ ದರ್ಶನ ಪಡೆದಿದ್ದಾರೆ. ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ. ತಮ್ಮ ರಾಜಕೀಯ ಮುಂದಿನ ನಡೆ ಕುರಿತು ಕಾರ್ಯಕರ್ತರು, ಆಪ್ತರೊಂದಿಗೆ ಚರ್ಚೆ ಮಾಡಿದ್ದಾರೆ.