ಬೆಂಗಳೂರು : ಕನಕಪುರ ವಿಧಾನಸಭಾ ಕ್ಷೇತ್ರದಿಂದ ಸಚಿವ ಆರ್. ಅಶೋಕ್ ಸ್ಪರ್ಧೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಹಾಗೂ ಕನಕಪುರ ಹಾಲಿ ಶಾಸಕ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಾಮ್ರಾಟ್ ಆದ್ರೂ ಬರಲಿ, ಚಕ್ರವರ್ತಿ ಆದ್ರೂ ಬರಲಿ. ಕನಕಪುರದಲ್ಲಿ ಒಳ್ಳೆಯ ಆತಿಥ್ಯ ಸಿಗುತ್ತೆ ಎಂದು ಸಾಮ್ರಾಟ್ ಅಶೋಕ್ ಆಗಮನದ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಕನಕಪುರದಲ್ಲಿ ತುಂಬಾ ಮಿಲ್ಟ್ರಿ ಹೋಟೆಲ್ ಗಳಿವೆ. ಅಶೋಕ್ ಅವರು ಬಂದು ಚೆನ್ನಾಗಿ ಟೈಮ್ ಪಾಸ್ ಮಾಡಿಕೊಂಡು ಹೋಗಲಿ. ನಾನು ನಾಮಿನೇಶನ್ ಹಾಕೋಕೆ ಹೋಗ್ತೀನಿ. ಮತ ಕೇಳೋಕೆ ಇನ್ನೊಂದು ಸಲ ಹೋಗ್ತೀನಿ ಅಷ್ಟೇ ಎಂದು ಕಡ್ಡಿ ಮುರಿದಂತೆ ಹೇಳಿಕೆ ನೀಡಿದ್ದಾರೆ.
ಬಿಜೆಪಿಯವರು ಗಢ ಗಢ ನಡುಗ್ತಿದ್ದಾರೆ
ಬಿಜೆಪಿಯವರಿಗೆ ನಮ್ಮನ್ನ ನೋಡಿದ್ರೆ ಎಷ್ಟು ಭಯ ಇದೆ ನೋಡಿ. ಗಢ..ಗಢ ಅಂತಾ ನಡುಗಿ ಹೋಗ್ತಿದ್ದಾರೆ. ಕನಕಪುರಕ್ಕೆ ಯಾರಾದ್ರೂ ಬರಲಿ ಒಳ್ಳೆಯ ಆಥಿತ್ಯ ಕೊಡ್ತೀವಿ. ಸ್ವಾಗತ ಮಾಡ್ತೀವಿ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ : ಸಿದ್ದು ವಿರುದ್ಧ ಸ್ಪರ್ಧೆ : ‘ಕನಸಲ್ಲೂ ಎಣಿಸಿರಲಿಲ್ಲ, ವಿಧಿ ನಿಯಮ’ ಎಂದ ಸೋಮಣ್ಣ
ನಮ್ಮ ಪಕ್ಷಕ್ಕೆ ಬರೋಕೆ ಕಾಯ್ತಾ ಇದ್ದಾರೆ
ರಾಜ್ಯದಲ್ಲಿ ಬಿರುಗಾಳಿ ಪ್ರಾರಂಭ ಆಗಿದೆ. ಬಸವೇಶ್ವರ ನಗರದ ಆಕಾಂಕ್ಷಿಯೊಬ್ಬರು ಇವತ್ತು ನಮ್ಮ ಗಾಳಕ್ಕೆ ಬಿದ್ದಿದ್ದಾರೆ. ಬಹಳ ವರ್ಷದಿಂದ ನಾನು, ಸಿದ್ದರಾಮಯ್ಯ ಗಾಳ ಹಾಕ್ತಿದ್ವಿ.ಈಗ ನಮ್ಮ ಗಾಳಕ್ಕೆ ಬಿದ್ದಿದ್ದಾರೆ. ಒಂದು ಹೊಸ ಅಧ್ಯಾಯ ಪ್ರಾರಂಭ ಆಗ್ತಿದೆ. ಇವತ್ತು ದೊಡ್ಡ ಬದಲಾವಣೆ ಆಗ್ತಿದೆ ಎಂದು ಡಿಕೆಶಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬಿಜೆಪಿಯವರೆಲ್ಲಾ ನಮ್ಮ ಪಕ್ಷಕ್ಕೆ ಬರೋಕೆ ಕಾಯ್ತಾ ಇದ್ದಾರೆ. ಇವತ್ತಿಂದ ಹೊಸ ಗಾಳಿ ಆರಂಭವಾಗಿದೆ. ಮುಂದೆ ಆಶ್ಚರ್ಯಕರ ಹೆಸರುಗಳು ಬರ್ತಾವೆ. ನಾನು ಯಾರಿಗೂ ಫೋನ್ ಮಾಡಿಲ್ಲ, ನೀವೇ ಊಹೆ ಮಾಡಿಕೊಳ್ತಿದ್ದೀರಿ ಎಂದು ಹೇಳಿದ್ದಾರೆ.