ಬೆಂಗಳೂರು : ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ಪರ ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಬ್ಯಾಟ್ ಬೀಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರೇಣುಕಾಚಾರ್ಯ, ಹಿರಿಯ ಶಾಸಕ ಕೆ.ಎಸ್ ಈಶ್ವರಪ್ಪ ಅವರು ತಮ್ಮ ನಿವೃತ್ತಿ ಪತ್ರವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಅಂದು ಹಿಂದುಳಿದ ವರ್ಗದ ನಾಯಕರಾಗಿ ಬಿಜೆಪಿಯಲ್ಲಿ ಇದ್ದಿದ್ದು ಈಶ್ವರಪ್ಪ ಅವರು ಮಾತ್ರ. ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಅವರು ಕೇವಲ ಆರೋಪಿ. ಈಶ್ವರಪ್ಪ ಮತ್ತೆ ವಿಧಾನಸಭೆಗೆ ಬರಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಮಾದಪ್ಪ ಏನು ಮಾಡ್ತಾನೋ ಗೊತ್ತಿಲ್ಲ : ಸೋಮಣ್ಣ ಅಚ್ಚರಿ ಹೇಳಿಕೆ
ಸಿಎಂ ಕುರ್ಚಿಗಾಗಿ ಹೊಡೆದಾಟ
ಕಾಂಗ್ರೆಸ್ ಸಿಎಂ ರೇಸ್ ಹಾಗೂ ಟಿಕೆಟ್ ಅಮಾಧಾನದ ಬಗ್ಗೆ ಪ್ರತಿಕ್ರಿಯಿಸಿರುವ ರೇಣುಕಾಚಾರ್ಯ, ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಹೊಡೆದಾಟ ನಡೆಯುತ್ತಿದೆ. ಮತ್ತೊಂದೆಡೆ, ಟಿಕೆಟ್ ವಂಚಿತರು ಅಸಮಾಧಾನ ಹೊರಹಾಕಿದ್ದಾರೆ. ಆದರೆ, ಬಿಜೆಪಿ ಪಕ್ಷದಲ್ಲಿ ಎಲ್ಲವನ್ನೂ ಹೈಕಮಾಂಡ್ ನಿಭಾಯಿಸುತ್ತದೆ ಎಂದು ತಿಳಿಸಿದ್ದಾರೆ.
ಈಶ್ವರಪ್ಪ ಪತ್ರ ಬರೆದಿದ್ದು ನಿಜ
ನಾನು ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಮಾಜಿ ಸಚಿವ ಈಶ್ವರಪ್ಪ ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾಗೆ ಪತ್ರ ಬರೆದಿರುವುದು ನಿಜ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಈ ಮಾತನ್ನು ಖಾಸಗಿಯಾಗಿ ಹಲವಾರು ಬಾರಿ ಹೇಳುತ್ತಿದ್ದರು. ಆದರೆ, ನಾವು ನಿಮ್ಮ ಸೇವೆ ಬೇಕೆನ್ನುತ್ತಿದ್ದೆವು. ಅವರಿಗೆ ಟಿಕೆಟ್ ನೀಡುವ ಬಗ್ಗೆ ವರಿಷ್ಠರು ತೀರ್ಮಾನಿಸುತ್ತಾರೆ ಎಂದು ಹೇಳಿದ್ದಾರೆ.