Wednesday, January 22, 2025

ವರಿಷ್ಠರಿಗೆ ಶೆಟ್ಟರ್ ಸೆಡ್ಡು : ಇಷ್ಟು ವರ್ಷ ಪಕ್ಷ ಕಟ್ಟಿದ್ದಕ್ಕೆ ಬೆಲೆಯೇ ಇಲ್ವಾ? ಎಂದು ಪ್ರಶ್ನೆ

ಬೆಂಗಳೂರು : ಇಷ್ಟು ವರ್ಷ ಪಕ್ಷ ಕಟ್ಟಿದ್ದಕ್ಕೆ ಬೆಲೆಯೇ ಇಲ್ವಾ? ಬಿಜೆಪಿ ಪಕ್ಷದಲ್ಲಿ ಹಿರಿಯ ನಾಯಕರಿಗೆ ಗೌರವ ಕೊಡುವ ಕೆಲಸ ಆಗಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವರಿಷ್ಠರ ವಿರುದ್ಧ ಬೇಸರ ಹೊರಹಾಕಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನು ಮತ್ತೆ ಸ್ಪರ್ಧಿಸುತ್ತೇನೆ. ಅವಕಾಶ ಕೊಡಿ ಎಂದು ವರಿಷ್ಠರಿಗೆ ಕೇಳಿದ್ದೇನೆ. ಇವತ್ತು ನಿಲ್ಲಬಾರದು ಎಂಬುದಕ್ಕೆ ಕಾರಣ ಏನೆಂದೂ ಹೈಕಮಾಂಡ್ ಅವರನ್ನು ಪ್ರಶ್ನಿಸಿದ್ದೇನೆ ಎಂದು ಹೇಳಿದ್ದಾರೆ.

ವರಿಷ್ಠರಿಂದ ಕರೆ ಬಂದಿದ್ದು ನಿಜ

ನನಗೆ ಬೆಳಗ್ಗೆ 11 ಗಂಟೆ ಸುಮಾರಿಗೆ ವರಿಷ್ಠರಿಂದ ಕರೆ ಬಂದಿದ್ದು ನಿಜ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ನೀವು ಹಿರಿಯ ನಾಯಕರು ಬೇರೆಯವರಿಗೂ ಅವಕಾಶ ಕೊಡಿ ಎಂದು ಸೂಚಿಸಿದರು. ಆದರೆ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ನಾನು ಪಕ್ಷವನ್ನು ಕಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕನಾಗಿ ಪಕ್ಷದಲ್ಲಿ ಹಲವು ಹುದ್ದೆ ನಿಭಾಯಿಸಿದ್ದೇನೆ. ಪಕ್ಷ ಸಂಘಟನೆಗೆ ನನ್ನ ಕೊಡುಗೆ ಬಹಳ ದೊಡ್ಡದಿದ್ದು, ಆರು ಬಾರಿ ಗೆದ್ದಿದ್ದೇನೆ. ವರಿಷ್ಠರ ಮಾತಿನಿಂದ ನಿಜವಾಗಿಯೂ ಬೇಸರವಾಯಿತು ಎಂದು ಜಗದೀಶ್ ಶೆಟ್ಟರ್ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ : ಚುನಾವಣಾ ಪ್ರಚಾರದ ರೋಡ್ ಮ್ಯಾಪ್ ಸಿದ್ದಪಡಿಸಿದ್ದೇವೆ : ಸಿಎಂ ಬಸವರಾಜ ಬೊಮ್ಮಾಯಿ

ಬೇರೆ ಅವಕಾಶ ಕೊಡ್ತೀವಿ ಅಂದ್ರು

ವರಿಷ್ಠರು ನಿಮಗೆ ಬೇರೆ ಅವಕಾಶ ಕೊಡ್ತೀವಿ ಬಂದು ಭೇಟಿಯಾಗಿ ಅಂದ್ರು. ಟಿಕೆಟ್ ಕೊಡಬಾರದು ಅನ್ನೋ ವಿಚಾರ ಇದ್ರೆ ಎರಡು ಮೂರು ತಿಂಗಳ ಹಿಂದೆ ಹೇಳಬೇಕಿತ್ತು. ನಾಮಪತ್ರ ಸಲ್ಲಿಕೆಗೆ(ನಾಮಿನೇಷನ್‌) ಎರಡು ದಿನ ಇರುವಾಗ ಹೇಳಿದ್ದು ಬಹಳ ಬೇಸರವಾಗಿದೆ. ಹೀಗಾಗಿ ಸ್ಪರ್ಧೆ ಮಾಡೇ ಮಾಡುತ್ತೇನೆ ಅಂತಾ ಹೇಳಿದ್ದೇನೆ. ವಿಚಾರ ಮಾಡಿ ತಿಳಿಸುವುದಾಗಿ ಹೇಳಿದ್ದಾರೆ. ಮತ್ತೆ ಚರ್ಚೆ ಮಾಡಿ ಟಿಕೆಟ್ ಕೊಡ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ನಾನು ಸ್ಪರ್ಧೆ ಮಾಡುತ್ತೇನೆ. ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದು ಬರುತ್ತೇನೆ. ಜಗದೀಶ್ ಶೆಟ್ಟರ್ ರಾಜಕಾರಣದಿಂದ ಹಿಂದೆ ಸರಿಯುವ ಮಾತೇ ಇಲ್ಲ. ನಾನೂ ಇನ್ನೂ ಹತ್ತು ವರ್ಷಗಳ ಕಾಲ ಸಕ್ರೀಯ ರಾಜಕಾರಣದಲ್ಲಿ ಇರುತ್ತೇನೆ ಎಂದು ಜಗದೀಶ್ ಶೆಟ್ಟರ್ ಖಡಕ್ ಆಗಿಯೇ ತನ್ನ ನಿಲುವನ್ನು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES