ಬೆಂಗಳೂರು : ಸಚಿವ ವಿ. ಸೋಮಣ್ಣ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವರುಣಾದಲ್ಲಿ ಕಣಕ್ಕಿಳಿಯುತ್ತಾರೆ ಎಂದು ಚರ್ಚೆಯಾಗಿದ್ದು ನಿಜ. ಆದರೆ, ವರುಣಾ ಕ್ಷೇತ್ರದಿಂದ ಸ್ಪರ್ಧಿಸಲ್ಲವೆಂದು ಈಗಾಗಲೇ ಬಿಜೆಪಿ ವರಿಷ್ಠರಿಗೆ ತಿಳಿಸಿದ್ದೇನೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಆ ಬಗ್ಗೆ ತೀರ್ಮಾನ ಮಾಡುವವನು ನಾನಲ್ಲ. ಹೈಕಮಾಂಡ್ ಗೂ ನನ್ನ ನಿಲುವನ್ನು ಸ್ಪಷ್ಟವಾಗಿ ತಿಳಿಸಿದ್ದೇನೆ. ನಾನು 45 ವರ್ಷ ಬೆಂಗಳೂರಿನಲ್ಲೇ ಕೆಲಸ ಮಾಡಿದ್ದು, ಅಲ್ಲಿಂದಲೇ ಸ್ಪರ್ಧಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಭಗವಂತ, ಮಾದಪ್ಪ ಏನು ಮಾಡ್ತಾನೋ ಗೊತ್ತಿಲ್ಲ. ನಾನು ಇಂತದ್ದೇ ಕ್ಷೇತ್ರ ಬೇಕು ಅಂಥಾ ಕೇಳಿಲ್ಲ, 11 ಚುನಾವಣೆ ಎದುರಿಸಿದ್ದೇನೆ, 224 ಕ್ಷೇತ್ರವೂ ನನಗಿಷ್ಟ ಎಂದು ಇದೇ ವೇಳೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಪ್ರತಿಕ್ರಿಯೆ ನೀಡದ್ದಾರೆ.
ಇದನ್ನೂ ಓದಿ : ದೇವೇಗೌಡರಿಗೂ ರೇವಣ್ಣ ಮನವೊಲಿಸುವ ಶಕ್ತಿ ಇಲ್ಲ : ಎಚ್.ಡಿ ಕುಮಾರಸ್ವಾಮಿ
ಇಂಥದ್ದೇ ಕ್ಷೇತ್ರ ಬೇಕು ಎಂದಿಲ್ಲ
ಚಾಮರಾಜನಗರದಲ್ಲಿ ಸ್ಪರ್ಧೆ ಮಾಡ್ತಿರಾ? ಎಂಬ ಸುದ್ದಿಗಾರರ ಪ್ರಶ್ನೆಗೆ, ಹೈಕಮಾಂಡ್ ತೀರ್ಮಾನ ಮಾಡಲಿದೆ. ನೀವು ಮಾಧ್ಯಮದವರು ಸುಮ್ಮನೆ ಬರೆಯುತ್ತೀದ್ದೀರಿ. ನಾನು ಇಂತಹದ್ದೇ ಕ್ಷೇತ್ರ ಬೇಕು ಎಂದು ಕೇಳಿಲ್ಲ. ನಿಮ್ಮನ್ನು ಬರೆಯಬೇಡಿ ಎಂದು ಹೇಳಲಾಗಲ್ಲ ಎಂದು ಸೋಮಣ್ಣ ಉತ್ತರಿಸಿದ್ದಾರೆ.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ನೇತೃತ್ವದಲ್ಲಿ ನಡೆದ ಜಿಲ್ಲಾ ರೈತ ಸಮಾವೇಶಕ್ಕೆ ಸಚಿವ ವಿ. ಸೋಮಣ್ಣ ಬರುತ್ತಾರೆ ಎಂದು ಹೇಳಿರಲಿಲ್ಲ. ಆದರೆ, ಮಂಗಳವಾರ ಸಂಜೆಯ ಹೊತ್ತಿಗೆ ನಡೆದ ದಿಢೀರ್ ಬೆಳವಣಿಗೆಯಲ್ಲಿ ಸೋಮಣ್ಣ ಹೆಸರು ಸೇರ್ಪಡೆಗೊಂಡಿದೆ. ಅದರಂತೆ ಸೋಮಣ್ಣ ಭಾಗಿಯಾಗಿದ್ದು, ಚಾಮರಾಜನಗರ ಟಿಕೆಟ್ ಪಕ್ಕಾ ಎಂಬ ಮಾತಿಗೆ ಪುಷ್ಠಿ ಕೊಟ್ಟಿದೆ.