Friday, December 27, 2024

YSV ದತ್ತಾ ಮಹತ್ವದ ಘೋಷಣೆ : ‘ಕಾಂಗ್ರೆಸ್ ಗೆ ಸೇರಿದ್ದು ತಪ್ಪಾಯ್ತು’ ಎಂದು ಬೇಸರ

ಬೆಂಗಳೂರು : ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದ ವೈಎಸ್ ವಿ ದತ್ತಾ ಅವರಿಗೆ ಕಾಂಗ್ರೆಸ್ ಟಿಕೆಟ್ ಮಿಸ್ ಆಗಿದೆ. ಹೀಗಾಗಿ, ದತ್ತಾ ಅವರು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

ಹೌದು, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವುದಷ್ಟೇ ಬಾಕಿ ಇದೆ ಎಂದು ಸ್ವತಃ ವೈಎಸ್ ವಿ ದತ್ತಾ ಅವರೇ ತಿಳಿಸಿದ್ದಾರೆ.

ಕಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ಗೆ ಸೇರಿದ್ದು ತಪ್ಪಾಯ್ತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಂತಹ ದೊಡ್ಡ ನಾಯಕರ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ ಎಂದು ಹೇಳಿದ್ದಾರೆ.

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ

ನನ್ನ ಕಾರ್ಯಕರ್ತರು ಹಾಗೂ ಅಭಿಮಾನಿಗಳೇ ಕಾಂಗ್ರೆಸ್ ಪಕ್ಷ ಸೇರಿ ಎಂದಿದ್ದರು. ಹೀಗಾಗಿ, ಜೆಡಿಎಸ್ ತೊರೆದು ಸೇರಿದ್ದೆ. ಈಗ ಅವರೇ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿ ಎನ್ನುತ್ತಿದ್ದಾರೆ. ಮುಂದಿನ ನಿರ್ಧಾರವನ್ನೂ ಅವರೇ ಕೈಗೊಳ್ಳಲಿದ್ದಾರೆ ಎಂದು ದತ್ತಾ ಮಾಹಿತಿ ನೀಡಿದ್ದಾರೆ.

ಟವೆಲ್ ಒಡ್ಡಿ ಮತ ಭಿಕ್ಷೆ ಕೇಳುವೆ

ಇಂದು ಬೆಂಬಲಿಗರು ಹಾಗೂ ಅಭಿಮಾನಿಗಳ ಸಭೆ ನಡೆಸಿದ್ದ ದತ್ತಾ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ. ಟವೆಲ್ ಗುರುತಿನಿಂದ ಚುನಾವಣಾ ಕಣಕ್ಕೆ ಇಳಿಯಲಿರುವ ದತ್ತಾ ಅವರು, ಟವೆಲ್ ಒಡ್ಡಿ ಮತ ಭಿಕ್ಷೆ, ಹಣ ಭಿಕ್ಷೆ ನೀಡಿ ಎಂದು ಕೇಳುತ್ತೇನೆ ಎಂದು ಭಾವುಕವಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ನಮ್ಮದು ಸಣ್ಣ ಪಕ್ಷ, ಇಲ್ಲಿ ದತ್ತಾಗೆ ಜಾಗವಿಲ್ಲ : ಕುಮಾರಸ್ವಾಮಿ

ದತ್ತಾಗೆ ಒಳ್ಳೆಯ ಸ್ಥಾನಮಾನ ಕೊಡ್ತಿವಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ವೈಎಸ್‌ವಿ ದತ್ತಾ ಸ್ವತಂತ್ರ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಏನಿಲ್ಲ, ನಮ್ಮ ಪಾರ್ಟಿಲಿ ಯಾರೂ ಕಂಡಿಷನ್ ಆಗಿ ಟಿಕೆಟ್ ಕೊಡ್ತಿವಿ ಅಂತ ಯಾರನ್ನು ಕರೆಸಿಕೊಂಡಿಲ್ಲ. ದತ್ತಾ ಅವರಿಗೆ ಒಳ್ಳೆಯ ಸ್ಥಾನಮಾನ ಕೊಡಬೇಕು, ಕೊಡ್ತಿವಿ. ಅವರು ಕಾಂಗ್ರೆಸ್ ಪಾರ್ಟಿ ಸೇರಬೇಕಾದ್ರೆ ಏನು ಮಾತನಾಡಿದ್ರು ಅನ್ನೋದನ್ನು ಗಮನಿಸಿ, ಆಮೇಲೆ ಮಾತನಾಡೋಣ ಎಂದು ಹೇಳಿದ್ದಾರೆ.

ನಾವೇನು ಮನುಷ್ಯರಾ?

ಮಲ್ಲಿಕಾರ್ಜುನ ಖರ್ಗೆ ಜೊತೆ ಕೆಲಸ ಮಾಡಲು ಸಿದ್ದ ಎಂಬ ತಮ್ಮ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಮಲ್ಲಿಕಾರ್ಜುನ ಖರ್ಗೆ ಒಬ್ಬ ಸೀನಿಯರ್. ಎಐಸಿಸಿ ಅಧ್ಯಕ್ಷರು. ನಮ್ಮಂತಹವರು ಅವರಿಗೆ ಬೆಂಬಲವಾಗಿ ನಿಂತುಕೊಳ್ಳಲಿಲ್ಲ ಅಂದರೆ ಅವರ ನಾಯಕತ್ವಕ್ಕೆ ನಾವು ಬೆಂಬಲಿಸಲಿಲ್ಲಾ ಎಂದರೆ ನಾವೇನು ಮನುಷ್ಯರಾ? ನಮಗೆ ಅಧಿಕಾರ ಮುಖ್ಯ ಅಲ್ಲ, ಕಾಂಗ್ರೆಸ್ ಅಧಿಕಾರ ಮುಖ್ಯ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES