ಬೆಂಗಳೂರು : ಈ ಬಾರಿಯ ಚುನಾವಣೆಯಲ್ಲಿ ವರುಣಾ ಕ್ಷೇತ್ರ ಸೇರಿದಂತೆ ಎರಡು ಕಡೆ ಸ್ಪರ್ಧೆ ವಿಚಾರದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿದ್ದರಾಮಯ್ಯ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮೂರು ಜಿಲ್ಲೆಯವರು ಕೋಲಾರದಲ್ಲಿ ಬಂದು ನಿಲ್ಲಿ ಅಂತ ಕರೆಯುತ್ತಿದ್ದಾರೆ. ಹೈಕಮಾಂಡ್ ಒಪ್ಪಿಕೊಂಡರೆ ಬರ್ತಿನಿ ಅಂತ ಹೇಳಿದ್ದೀನಿ ಎಂದಿದ್ದಾರೆ.
ಹೈಕಮಾಂಡ್‌ನವರು ಏನು ತೀರ್ಮಾನ ಮಾಡ್ತಾರೆ, ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಹಾಗೆ ಮಾಡುತ್ತೇನೆ. ಹೈಕಮಾಂಡ್ ಎರಡು ಕಡೆ ನಿಲ್ಲು ಅಂದ್ರೆ ನಿಲ್ತಿನಿ. ಇಲ್ಲಾ ಒಂದೇ ಕಡೆ ನಿಂತುಕೊಳ್ಳುತ್ತೇನೆ. ಲೀಡರ್‌ಗಳು ಕರೆದಾಗ ಬೇಡ ಅಂತ ಹೇಳಲ್ಲ ನಾನು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸ್ವಂತ ಶಕ್ತಿ ಮೇಲೆ ಸರ್ಕಾರ ಮಾಡಿದ್ದಾರಾ?
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲ್ಲ, ನಾನೇ ಕಿಂಗ್ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಆ ಕುಮಾರಸ್ವಾಮಿ ಬಾಲಿಷವಾದ ಹೇಳಿಕೆಗೆಲ್ಲ ಉತ್ತರ ಕೊಡಲ್ಲ. ಯಾವತ್ತಾದರೂ ಜನತಾದಳ ಎಸ್ ಆದ ಮೇಲೆ ಅವರ ಸ್ವಂತ ಶಕ್ತಿ ಮೇಲೆ ಸರ್ಕಾರ ಮಾಡಿದ್ದಾರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ವರುಣಾ, ಶಿಕಾರಿಪುರದಲ್ಲಿ ‘ಮ್ಯಾಚ್ ಫಿಕ್ಸಿಂಗ್’ : ಡಿಕೆಶಿ ಹೇಳಿದ್ದೇನು?
ನೂರಕ್ಕೆ ನೂರು ಕಾಂಗ್ರೆಸ್ ಗೆ ಅಧಿಕಾರ
1999ರಲ್ಲಿ ಜನತಾದಳ ಎಸ್ ಆಯ್ತು. ಆಗ ನಾನೇ ಅಧ್ಯಕ್ಷನಾಗಿದ್ದೆ. ಅವತ್ತಿನಿಂದ ಇವತ್ತಿನವರೆಗೆ ಯಾವತ್ತಾದರೂ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬಂದಿದ್ದಾರಾ? ಮತ್ತೆ ಹೆಂಗೆ ಅವರು ಮುಖ್ಯಮಂತ್ರಿ (ಚೀಫ್ ಮಿನಿಸ್ಟರ್) ಆಗ್ತಾರೆ. ಅವಕ್ಕೆಲ್ಲಾ ಉತ್ತರ ಕೊಡಲು ಆಗಲ್ಲ. ಕಾಂಗ್ರೆಸ್ ಪಕ್ಷ ನೂರಕ್ಕೆ ನೂರು ಅಧಿಕಾರಕ್ಕೆ ಬರುತ್ತದೆ ಎಂದು ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಇದೇ ವೇಳೆ ಅರಸೀಕೆರೆಯಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶಾಸಕ ಶಿವಲಿಂಗೇಗೌಡರು ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.