Monday, November 25, 2024

ಮೋದಿ ರಾಜ್ಯಕ್ಕೆ ಬರುವುದು ರೆಸ್ಟ್ ಮಾಡಲು : ಕುಮಾರಸ್ವಾಮಿ ಲೇವಡಿ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿ ಮಾಡಿ ಸುಸ್ತಾಗಿ ಹೋಗಿದ್ದಾರೆ. ಅದಕ್ಕಾಗಿ ಪಾಪ ರೆಸ್ಟ್ ಮಾಡಲು ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಪದೇ ಪದೆ ಪ್ರಧಾನಿ ಮೋದಿ ಕರ್ನಾಟಕಕ್ಕೆ ಆಗಮಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಪ್ರಧಾನಿ ಮೋದಿ ಅವರು ಹುಲಿ ವಿಹಾರಕ್ಕಾಗಿ ಬಂಡೀಪುರಕ್ಕೆ ಬರುತ್ತಿದ್ದಾರೆಯೇ ಹೊರತು, ರಾಜ್ಯದ ಜನರ ಕಷ್ಟಸುಖ ವಿಚಾರಿಸಲು ಅಲ್ಲ, ಕೆಲಸ ಮಾಡಿ ಮಾಡಿ ದಣಿದಿದ್ದಾರೆ ಪಾಪ. ಹೀಗಾಗಿ, ವಿಶ್ರಾಂತಿ ಪಡೆಯಲು ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಕುಟುಕಿದ್ದಾರೆ.

ಮೋದಿ ಸತ್ತವರ ಮನೆಗೆ ಹೋದ್ರಾ?

ಚುನಾವಣೆ ಟೈಮ್ ನಲ್ಲಿ ಬರ್ತಾರೆ. ಇಂದೂ ನೋಡ್ತಿದೀವಿ. ತಲೆಮೇಲೆ ಟೋಪಿ, ಕನ್ನಡಕ, ಸಫಾರಿ ಡ್ರೆಸ್ ಹಾಕಿ ಹುಲಿ ನೋಡೋಕೆ ಹೋಗಿದ್ದಾರೆ. ಹುಲಿ, ಚಿರತೆ ದಾಳಿ ಮಾಡಿ ಸತ್ತವರ ಮನೆಗೆ ಹೋದ್ರಾ? ಇವರು ಹುಲಿ ಸಂರಕ್ಷಣೆ ಮಾಡೋಕೆ ಬಂದಿದಾರೆ. ಪ್ರಾಣಿಗಳ ಮೇಲೆ ತೋರಿಸುತ್ತಿರುವ ಪ್ರೀತಿ ಜನರ ಮೇಲೆ ಏಕಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ.

ಹುಲಿ, ಚಿರತೆ ದಾಳಿಗೆ ಪ್ರಾಣ ಕಳೆದುಕೊಂಡವರ ಬಗ್ಗೆ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಅನುಕಂಪದ ಮಾತನಾಡಿದ್ರಾ? ಅಮಾಯಕರನ್ನು ದೇಶ ರಕ್ಷಣೆ ಹೆಸರಲ್ಲಿ ಬಲಿ ಪಡೆದಿದ್ದಾರೆ. ಇಂದು ರಾಜ್ಯ ಕಟ್ಟುತ್ತೀವಿ, ದೇಶ ಕಟ್ಟುತ್ತೀವಿ ಅಂತಾರೆ. ಮನುಷ್ಯರಿಗೂ ಅನುಕಂಪ ತೋರಿಸಬೇಕಲ್ಲಾ? ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಸಫಾರಿ ಡ್ರೆಸ್‌ನಲ್ಲಿ ಮಿಂಚಿದ ಪ್ರಧಾನಿ ಮೋದಿ : 20 ಕಿ.ಮೀ.ವರೆಗೆ ಸಫಾರಿ

ಕಾಂಗ್ರೆಸ್, ಬಿಜೆಪಿ ನಡುವೆ ಒಳ ಒಪ್ಪಂದ

ಕಾಂಗ್ರೆಸ್ ಹಾಗೂ ಬಿಜೆಪಿ 140ರಿಂದ 150 ಸೀಟ್ ಗೆಲ್ಲುತ್ತೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಚ್.ಡಿ ಕುಮಾರಸ್ವಾಮಿ, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಒಳ ಒಪ್ಪಂದವಿದೆ. ಹಾಗಾಗಿ ಅವರು ಈ ರೀತಿ ಹೇಳುತ್ತಾರೆ. ಇದನ್ನು ನಾನು ಹೇಳ್ತಿಲ್ಲ. ಶಿಕಾರಿಪುರದ ಕಾರ್ಯಕರ್ತರೇ ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಜೆಡಿಎಸ್ ಒಳ ಒಪ್ಪಂದದ ಬಗ್ಗೆ ಮಾತನಾಡದೇ ನೈತಿಕತೆ ಉಳಿಸಿಕೊಳ್ಳೋದು ಒಳ್ಳೆಯದು. ನಾನು ಸ್ಪಸ್ಟ ಬಹುಮತದ ಸರ್ಕಾರ ತರುವ ನಿರ್ಧಾರ ಮಾಡಿದ್ದೇನೆ. ನನಗೆ ಅದರಲ್ಲಿ ಸಂಪೂರ್ಣ ವಿಶ್ವಾಸವಿದೆ ಎಂದು ಎಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES