ಬೆಂಗಳೂರು : ಟಿಕೆಟ್ ವಂಚಿತ ಕಾಂಗ್ರೆಸ್ ನಾಯಕರು ಬಂಡಾಯ ಎದ್ದಿರುವ ಬಗ್ಗೆ ಹಾಗೂ ಬಂಡಾಯ ನಾಯಕರಿಂದ ಜೆಡಿಎಸ್ಗೆ ಲಾಭವಾಗುತ್ತಿರುವವ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸುಳ್ಳು ಭರವಸೆಗೆ ಅನೇಕ ಆಕಾಂಕ್ಷಿಗಳು ಕಂಗಾಲಾಗಿದ್ದಾರೆ. ಆಕಾಂಕ್ಷಿಗಳು ಕಣ್ಣಲ್ಲಿ ನೀರು ಹಾಕುತ್ತಿದ್ದಾರೆ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ಹೇಗೆ ತೆಗೆದುಕೊಂಡಿದ್ದಾರೆ ಅವರಿಗೇ ಗೊತ್ತಿದೆ ಎಂದು ಕುಟುಕಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೇ ಶಾಕ್
ಕಾಂಗ್ರೆಸ್ ಟಿಕೆಟ್ ವಂಚಿತ 15ರಿಂದ 20 ಜನ ಮಾಧ್ಯಮಗಳ ಮುಂದೆ ಕಣ್ಣೀರು ಹಾಕುತ್ತಿದ್ದುದನ್ನು ಕಂಡಿದ್ದೇನೆ. ಕಾಂಗ್ರೆಸ್ ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ಕೊಟ್ಟು ಶಾಕ್ ನೀಡುತ್ತೇನೆ ಅಂದಿತ್ತು. ಆದರೆ, ಈಗ ಕಾಂಗ್ರೆಸ್ ಪಕ್ಷಕ್ಕೆ ಅದು ಶಾಕ್ ನೀಡಿದೆ ಎಂದು ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ: ವರುಣಾ, ಶಿಕಾರಿಪುರದಲ್ಲಿ ‘ಮ್ಯಾಚ್ ಫಿಕ್ಸಿಂಗ್’ : ಡಿಕೆಶಿ ಹೇಳಿದ್ದೇನು?
ದತ್ತಾ ಪಕ್ಷ ಬಿಟ್ಟು ಹೋಗಿದ್ದಾರೆ
ವೈಎಸ್ ವಿ ದತ್ತಾ ಮತ್ತೆ ಜೆಡಿಎಸ್ ನತ್ತ ಮುಖ ಮಾಡಿರುವ ಕುರಿತು ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಆ ವಿಚಾರ ನನಗೆ ಗೊತ್ತಿಲ್ಲ. ನನ್ನ ಹತ್ತಿರ ಚರ್ಚೆ ಮಾಡಿಲ್ಲ. ವೈಎಸ್ ವಿ ದತ್ತಾ ಅವರು ಜೆಡಿಎಸ್ ಪಕ್ಷ ಬಿಟ್ಟು ಹೋಗಿದ್ದಾರೆ. ಅವರ ತೀರ್ಮಾನ ಏನು ಅಂತಾ ಗೊತ್ತಿಲ್ಲ ಎಂದು ಹೇಳಿದ್ದಾರೆ.
ನಾಳೆ ದತ್ತಾ ಅವರು ಕಾರ್ಯಕರ್ತರ ಸಭೆ ಕರೆದಂತೆ ಕಾಣುತ್ತೆ. ಅವರು ನನ್ನ ಸಂಪರ್ಕದಲ್ಲಿ ಇಲ್ಲ. ನನ್ನ ಮುಂದೆ ಪ್ರಸ್ತಾವನೆ ಇಲ್ಲದಾಗ ನಾನೇನು ಹೇಳಲಿ ಎಂದು ನಯವಾಗಿಯೇ ಉತ್ತರ ನೀಡಿದ್ದಾರೆ.